ಬುಧವಾರ, ಮಾರ್ಚ್ 18, 2015

"ಬ್ಲಾಗಿಲು" ತೆರೆದಿರುವೆ


ಎಲ್ಲರಿಗೂ ನಮಸ್ಕಾರ .....
                  ಇಷ್ಟುಕಾಲ ಬ್ಲಾಗ್ ನ ಬಾಗಿಲ ಹಿಂದೆ ನಿಂತು ಕುತೂಹಲದಿಂದ  , ಅಕ್ಕರೆಯಿಂದ ಬರಹಗಳನ್ನು ಓದುತ್ತಿದ್ದ ನನಗೆ ನನ್ನ ಬರಹಗಳಿಗೂ ಬ್ಲಾಗೊಂದು ಬೇಕೆನ್ನಿಸುವ ತುಡಿತ ಹುಟ್ಟಿದ್ದೇ ಕಾರಣ , 'ಮಾಗಿಮಲ್ಲೆ 'ಯ ಬ್ಲಾಗಿಲು ತೆರೆದಿರುವೆ . ನನಗೆ ಏನನ್ನಾದರೂ ಕೊಡುವ ಆಸೆಯೂ , ಹಾಗೆ ಎಲ್ಲರ ಬರಹದ ಚಂದಗಳನ್ನು ಸ್ವೀಕರಿಸುವ ಆಸೆಯೂ ಇದೆ . ಮಲೆನಾಡಿನಿಂದ ಬಂದ ನನಗೆ ಅಲ್ಲಿಯ ಮುಗ್ಧ , ಮಾಸದ , ಹಸಿರ ಸೌಂದರ್ಯ ನಿರಂತರ ಕಾಡುವ ಕನಸು . ಮಾಗಿಕಾಲದ ಚುಮುಚುಮು ನಸುಕಿನಲ್ಲಿ ಮನೆಯ ಹಿಂದಣ ಅಂಗಳಕ್ಕೆ ದುಡುದುಡನೆ ಓಡುತ್ತಿದ್ದದ್ದು 'ಮಾಗಿಮಲ್ಲೆಯ ' ತೀರದ ಆಸೆಯಿಂದಲೇ . ಅಕ್ಕಪಕ್ಕದ ಅತಿಯಾಶೆಯ ಹೆಂಗಳೆಯರು ನನ್ನ  ಮಲ್ಲಿಗೆಯನ್ನೆಲ್ಲಾ ಕೊಯ್ದೇಬಿಟ್ಟಿರುವರಾ....? ಓಡುವ ಬಾಲೆಯ ಎದೆಯಲ್ಲಿನ  ಅಂದಿನ ಈ ಆತಂಕ ಈಗ ನಗೆ ಹುಟ್ಟಿಸುತ್ತದೆ . ನಿಜ , ವಯೋಮಾನಕ್ಕೆ ತಕ್ಕಂತೆ ಆತಂಕಗಳಿರುವುದು ಸೃಷ್ಟಿಧರ್ಮ .   

           ಇರಲಿ , ಗಿಡದಲ್ಲಿ ಅರಳಿರುತ್ತಿದ್ದ ಹೂಗಳು ಸಾಸಿರದ ಸಂಖ್ಯೆಯಲ್ಲಿ . ಹಸಿರೆಲೆಗಳ ನಡುವೆ ಬೆಳ್ಳಗೆ , ನವಿರು ಕಂಪ ಬೀರುತ್ತ ನನ್ನ ಸೆಳೆಯುತ್ತಿದ್ದವು . ಗಿಡದ ಕೆಳಗೆ ನಿಂತು , ಒಂದೇ ಒಂದು ಹೂವಿನ ತೊಟ್ಟು ಹಿಡಿದು ಸೆಳೆಯಹೊರಟರೆ  ಸಾಕು , ಒಹ್ ...!ತಪತಪನೆ ಮೈಮೇಲೆ ಸುರಿಯುತ್ತಿತ್ತು ಗಿಡದ ತುಂಬಾ ಆವರಿಸಿ ಮುತ್ತಿಡುತ್ತಿದ್ದ ಮಾಗಿ ಇಬ್ಬನಿಯ ಹನಿಗಳು . ಅಬ್ಬಬ್ಬಾ ... ಮೊದಲೇ ಮಾಗಿಕಾಲದ ನಡುಗಿಸುವ ಚಳಿ , ಜೊತೆಗೆ, ಹಿಮನೀರು ಸುರಿದಂತೆ ಇಬ್ಬನಿಯ  ತಬ್ಬುವಿಕೆ. ನಿಂತಲ್ಲೇ ಮರಗಟ್ಟಿದ ಅನುಭವವಾಗುತ್ತಿತ್ತು . 'ಅದೇನೇ ಈ ಚಳಿಯಲ್ಲಿ ನಿನ್ನ ಹುಡುಗಾಟ,  ಚಳಿ ದಂಡ  ಆಗುತ್ತೆ  ನೋಡು ,  ಬಿಸ್ಲು  ಬರುತನ್ಕ  ಕಾಯಕ್ಕಾಗಲ್ವಾ  ' ಅಪ್ಪ ಅಮ್ಮ ಪ್ರೀತಿಯಿಂದ ಬೈಯುತ್ತಿದ್ದರು . ಕಸು ತುಂಬಿದ್ದ ಬಾಲ್ಯದ ಮೈಮನಸ್ಸಿಗೆ ಇವೆಲ್ಲ ತಟ್ಟುತ್ತಿರಲಿಲ್ಲ . ಒಂದೊಂದೇ ಹೂಕಿತ್ತು ಉದ್ದನೆಯ ಲಂಗವನ್ನು ತುಸು ಮೇಲೆತ್ತಿ ಬುಟ್ಟಿಯಂತೆ ಬಾಗಿಸಿ , ತುಂಬುತ್ತಿದ್ದೆ , ಬೆಳ್ಳನೆಯ ನೂರಾರು ಹೂಗಳನ್ನು.... ಗಿಡವನ್ನೆಲ್ಲ  ಬರಿದಾಗಿಸುತ್ತಿದ್ದ ನನಗೆ , ಆ ತಾಯಮಡಿಲಲ್ಲಷ್ಟು ಹೂ ಉಳಿಸಿ ಅವಳ ಅಂದವನ್ನು ಕಂಗಳಿಂದ ಹೀರಿದರೆ ಸಾಕೆಂಬ ಪ್ರಜ್ಞೆ ಇರಲಿಲ್ಲ ..
             ಇಂದೂ ಈ ಚಿತ್ರಣ  ನನ್ನೆದೆಯಲ್ಲಿ ಮಾಸದ ಚೆಲುವಾಗಿಯೇ  ನಗುತ್ತಿದೆ . ಕಾಲಘಟ್ಟ ಇಂದು ನನ್ನನ್ನು ಬಹಳದೂರ ಕರೆತಂದಿದೆ . ಇಂದು ಮನೆಯಲ್ಲಿ ಅಂದಿನಂಥ ಅಂಗಳವಿಲ್ಲ . 'ಮಾಗಿಮಲ್ಲೆಯ ' ಗಿಡವಿಲ್ಲ . ಕೊಯ್ದು ನನ್ನ ಸೆರಗಿಗೆ ತುಂಬಲು ಹೂವಿಲ್ಲ . ಹೂವಿನ ಸ್ಪರ್ಶದ ಇಬ್ಬನಿಯ ಸೇಚನವಿಲ್ಲ . ಎಲ್ಲವೂ  ಅಧುನಿಕ ಸ್ಪರ್ಶದ ನಯಗಾರಿಕೆಯ ಬದುಕು . ಅದಕ್ಕಾಗಿ ಬೇಸರವೂ ಇಲ್ಲ. . ಬದುಕು ನಿಂತ ನೀರಲ್ಲವಲ್ಲ.... .! ಹರಿಯುತ್ತೆ ಹಾದಿ ಸಿಕ್ಕಂತೆ . ಈಗ ಬರಹವನ್ನು ಎದೆಗಪ್ಪಿಕೊಂದಿರುವೆ , ಒಂದೊಂದು ಬರವಣಿಗೆಯೂ ಅಂದು ಮಡಿಲ ತುಂಬುತ್ತಿದ್ದ 'ಮಾಗಿಮಲ್ಲೆ ' ಹೂವನ್ನು ನೆನಪಿಸುತ್ತದೆ . ಪ್ರಕಟಗೊಂಡಾಗ ಲಂಗದ ಬುಟ್ಟಿಗೆ 'ಹೂವೊಂದು '  ಬಂದುಬಿದ್ದಂತೆ , ಇಬ್ಬನಿಯ ತಂಪು ಸೇಚನವಾದಂತೆ ದೇಹ , ಮನಸ್ಸು ನವಿರಾಗಿ  ಕಂಪಿಸುತ್ತೆ ..... ಸಾಕಲ್ಲ ಇಷ್ಟು,  ಬರವಣಿಗೆಯ ಬಿಡದ ನಂಟಿಗೆ .  
             ಹೆಜ್ಜೆಯಿಟ್ಟಿರುವೆ . ಆ ನೆನಪು ನಿರಂತರವೆಂದು ಬ್ಲಾಗಿಗೆ 'ಮಾಗಿಮಲ್ಲೆ ' ಎಂದೇ ಹೆಸರಿಟ್ಟಿರುವೆ .
                                                            ಎಸ್ .ಪಿ. ವಿಜಯಲಕ್ಷ್ಮಿ
         
          

5 ಕಾಮೆಂಟ್‌ಗಳು: