ಗುರುವಾರ, ಜುಲೈ 16, 2015

ಹೀಗೊಬ್ಬ ರಾಮಾಚಾರಿ


ಹೀಗೊಬ್ಬ ರಾಮಾಚಾರಿ ಕಥೆ    3. 7. 2015

' ಏ ಸರೂ ', ಕಿವಿಗೆ ಬಿದ್ದ ಆ ದನಿ ಇಡೀ ದೇಹವನ್ನು ಚಕ್ಕನೆ ವ್ಯಾಪಿಸಿಬಿಟ್ಟಿತು . ಅಡಿಯಿಂದ ಮುಡಿಯವರೆಗಿನ ನರಗಳನ್ನು ನವಿರುಕಂಪನದಲ್ಲಿ ಮೆಲ್ಲಗೆ ಅಲ್ಲಾಡಿಸಿತು . 'ಇದು ಅವನದೇ ದನಿ ', ಗಕ್ಕನೆ ತಿರುಗಿದೆ . ಅರೆಕ್ಷಣ ಗೊಂದಲವಾಯಿತು . 'ಏಯ್ ಗೊತ್ತಾಗ್ಲಿಲ್ಲೇನೆ ....' ಕೈ ನೀಡಿದ . ' ಅರೇ ಕೃಷ್ಣ ' , ಕೈಹಿಡಿದೆ  ತುಂಬಾ ಆತ್ಮೀಯತೆಯಿಂದ. ನಿಮಿಷಗಳ ನೋಟಕ್ಕೆ ಸಿಕ್ಕವನನ್ನು ಅಳೆಯುತ್ತ ಹೋದೆ .......
    * * * *
ನಾನು ಹೀಗೆಂದುಕೊಂಡಿದ್ದು ಅದೆಷ್ಟುಬಾರಿಯೋ ನೆನಪಿಲ್ಲ ಬಿಡಿ .ಇವನು ನಿಜಕ್ಕೂ ರಾಮಾಚಾರಿಯೇ.
ರಾಮಾಚಾರಿ ಯಾರೆಂದು ನಿಮಗೂ ಗೊತ್ತಿದೆ . ಇವನು ರಾಮಾಚಾರಿ ಅಂತ ನಾನಂದುಕೊಳ್ಳಲು ಶುರುಮಾಡಿದ್ದು  ನಾಗರಹಾವು ಸಿನಿಮಾ ಬಂದಮೇಲೆಯೇ . ಅದೆಷ್ಟೋಬಾರಿ ನಾನು ಯೋಚಿಸಿದ್ದುಂಟು ಇವನನ್ನು ನೋಡಿಯೇ ಆ ಪಾತ್ರ ಸೃಷ್ಟಿಯಾಯಿತೇ ಅಥವಾ ಕಲ್ಪನೆಯೇ  ಎಂದು . ಕಲ್ಪನೆಯಂತೂ ಇರಲಾರದು . ಇಂಥವರು ಇರಬಹುದು ಈ ವಿಶಾಲಜಗತ್ತಿನ ಅದೆಷ್ಟೋ ಕಡೆಯಲ್ಲಿ ಅದೆಷ್ಟೋಮಂದಿ . ಆದರೆ ಇವನನ್ನೇ ನೋಡಿ ಬರೆದರೇ ಎನ್ನುವ ನನ್ನ ಯೋಚನೆಯಲ್ಲಿ ಹುರುಳೇನಿಲ್ಲ .   ನನ್ನ ಕಣ್ಣಿಗೆ ಬಿದ್ದ ಇವನು      ಆ ಲೇಖಕರ ಕಣ್ಣಿಗೆ ಬೀಳಲು ಸಾಧ್ಯವಿಲ್ಲ .ಕಾರಣ ಇವ ನನ್ನೂರಿನವನು ಲೇಖಕರು ಬೇರೆ ಊರಿನವರು . ಅವರಿಗೂ ಇಂಥವನೊಬ್ಬ ಎಲ್ಲಿಯೋ ಕಂಡಿದ್ದಾನೆ ಎನ್ನುವುದೇ ಸರಿ . ಹೀಗೆ ಕಂಡಾಗ ಆ ಪಾತ್ರ ಸೃಷ್ಟಿಯಾಗಿದೆ , ತೆರೆಯಮೇಲೂ ಬಂದಿದೆ. ಓದಿದ , ನೋಡಿದ ಜನ ತಮ್ಮ ಆಸುಪಾಸಿನಲ್ಲಿ ಇಂಥ ಸಾಮ್ಯತೆಯ ವ್ಯಕ್ತಿ ಇದ್ದಾಗ ' ಓ, ಇವನನ್ನೇ ನೋಡಿ ಬರೆದಿರಬೇಕು , ಇವನೇ ರಾಮಾಚಾರಿ ' ಅಂದುಕೊಳ್ಳುವುದಿಲ್ಲವೇ ,ಬಹುಷಃ ನಾನೂ ಹೀಗಿರಬಹುದು . ಅದೇನೇ ಇರಲಿ ನನ್ನ ಬಾಲ್ಯ , ಹರಯದ ಅದೆಷ್ಟೋಕಾಲ ನಮ್ಮೊಡನಾಡಿದ ಈ 'ತರಲೆ ಕೃಷ್ಣ ' ಮುಂದೆ ನಾನು ನಾಗರಹಾವು ಸಿನಿಮಾ ನೋಡಿಬಂದಮೇಲೆ ರಾಮಾಚಾರಿಯಾಗಿ ನನ್ನ ಮನದಂಗಳದಲ್ಲಿ ಸುಳಿಯುತ್ತಲೇ ಇದ್ದಾನೆ . ಅಂದರೆ ಈ ಸಿನಿಮಾ ಬರುವಮುಂಚೆಯೇ ಈ ಕೃಷ್ಣ ಥೇಟ್ ರಾಮಾಚಾರಿಯಂಥ ಕ್ಯಾರೆಕ್ಟರ್ ಆಗಿ ನನ್ನೂರಲ್ಲಿ 'ಸುಪ್ರಸಿಧ'್ಧನೇ ಆಗಿದ್ದ, ಹೀಗೆಂದರೆ ಸರಿಯಾದೀತೋ ಇಲ್ಲವೋ ,ಯಾಕೆಂದರೆ ಹಲವರ ಪಾಲಿಗೆ ಇವನು ಕುಪ್ರಸಿಧ್ಧ .

ಇವನು ಒಂದುರೀತಿಯಲ್ಲಿ ಸುಂದರಾಂಗನೂ ಹೌದು . ಆಜಾನುಬಾಹು ಅಲ್ಲದಿದ್ದರೂ ಐದುಅಡಿ, ಎಂಟುಇಂಚು ಎತ್ತರದ , ಕೆಂಪನೆಯ , ಬೇಕೆಂದಾಗ ತಿರುವಲು ಬರುವಂಥ ಕೊಂಚಹುರಿಮೀಸೆಯ 'ಆಂಗ್ರಿ -
ಯಂಗ್ ಮ್ಯಾನ್ ' ಲುಕ್ಕು . ಓಡಾಡುವ ಶೈಲಿಯೋ 'ಡೋಂಟ್ ಕೇರ್ ' ನಡಿಗೆ . ಎದೆಸೆಟೆಸಿ , ತೋಳುಗಳ  ಬೀಸಿ ಬೀದಿಯಲ್ಲಿ ನಡೆವಾಗ ಬಹುಮಂದಿಗೆ ಇವನೊಬ್ಬ ಮದಿಸಿದ ಗಜದಂತೆ ಕಾಣುತ್ತಿದ್ದ. ನಕ್ಕರಂತೂ ಎದಿರುಬರುವ ಹರಯದ ಹುಡುಗಿಯರು ಒಂಥರಾ ಔಟ್. ಆದರೆ ಸಣ್ಣ ಊರಾದ್ದರಿಂದ , ಮನೆಮನೆಯಲ್ಲಿ ಸಂಪ್ರದಾಯದ ನಡವಳಿಕೆಯ ಲಕ್ಷ್ಮಣರೇಖೆಯ ದೇಖರೇಖಿಯಲ್ಲಿ ಬೆಳೆಯುತ್ತಿದ್ದುದರಿಂದ ಔಟಾಗುತ್ತಿದ್ದ ಹುಡುಗಿಯರು ಬಹಳಕಡಿಮೆ . ಇನ್ನು ಭಯ, ಹೆದರಿಕೆ, ಹಿಂಜರಿಕೆ, ಸಂಕೋಚ, ನಾಚಿಕೆ, ಮುಲಾಜು ಊಹ್ಞೂ , ಇಂಥ ಸಾತ್ವಿಕ ಗುಣಗಳು ಯಾವುವೂ ಇವನ ಹತ್ತಿರ ಸುಳಿದಿದ್ದೇ ಇಲ್ಲ. ಎಲ್ಲೆಂದರಲ್ಲಿ, ಹೇಗೆಂದರಲ್ಲಿ, ಯಾವಾಗೆಂದರಲ್ಲಿ ಏನೇನೋ ಕಾರಣಗಳಿಗಾಗಿ  ಹಿಂದೆಮುಂದೆ ನೋಡದೆ  ಧುಮುಕುವ ಇವನರೀತಿಗೆ ಇವನೊಂಥರಾ 'ಒರಟ'ನಾಗೇ ಎಲ್ಲರ ಕೆಂಗಣ್ಣಿಗೂ ಬೀಳುತ್ತಿದ್ದ. ಹರಯ ದೇಹದ ನರನಾಡಿಗಳಲ್ಲೆಲ್ಲಾ ಬಿಸಿಬಿಸಿಯಾಗಿ ಪ್ರವಹಿಸುತ್ತಿದ್ದ ಸುಂದರ ವಸಂತಕಾಲ ,ಆಗಾಗ ಒಂದಿಷ್ಟು ಪೋಲೀಸ್ವಭಾವವೂ ಬಿಚ್ಚುತ್ತಿದ್ದುದನ್ನು ಕಂಡವರು ,
    'ಹಾಳಾದವನು ಅಪಾಪೋಲಿ . ಯಾರೂ ಅವನಜೊತೆ ಸೇರ್‍ಬೇಡಿ . ಇನ್ನು ಹೆಸರೋ ಶ್ರೀ.....ಕ್ರಿಷ್ಣ 'ಎಂದು
ಮಡಿವಂತರು ವ್ಯಂಗ್ಯವಾಗಿ ಬೈದು ಶಾಪಹಾಕುತ್ತಿದ್ದುದುಂಟು. ಈ ಶಾಪಗಳೆಲ್ಲಾ ಈ ಒರಟನ ಕಿವಿಯ ತೂತನ್ನೇನೋ ಹೊಗುತ್ತಿದ್ದವು . ಆದರೇನು, ಇಲ್ಲೂ ಇವನ ಡೋಂಟ್‍ಕೇರ್  ಬುಧ್ಧಿಕೆಲಸಮಾಡುತ್ತಿತ್ತು .
ಹರಯದ ಹೆಗ್ಗುರುತಾದ ಆ ಹುರಿಮೀಸೆಯನ್ನು ಮೆಲ್ಲಗೊಮ್ಮೆ ತಿರುವಿ, ತಣ್ಣಗೆನಕ್ಕು ನಡೆದುಬಿಡುತ್ತಿದ್ದ ಈ ಹಾಳಾದವನು. ಪಾಪ, ಆ ಶ್ರೀಕೃಷ್ಣನೇ ತನ್ನಹೆಸರು ಈರೀತಿ ಅಪಾರ್ಥಕ್ಕೆಡೆಮಾಡಿಕೊಟ್ಟು , ದುರ್ಬಳಕೆಯಾಗಿದ್ದಕ್ಕೆ ಅದೆಷ್ಟು ನೊಂದುಕೊಳ್ಳುತ್ತಿದ್ದನೋ ಅದಕ್ಕೇ ಇರಬೇಕು ಈ ಕೃಷ್ಣ ಒಮ್ಮೆಕೂಡ ದೇವಸ್ಥಾನದ ಒಳಗೆ ಬಿಜಯಂಗೈಯುತ್ತಲೇ ಇರಲಿಲ್ಲ . ಒಟ್ಟಿನಲ್ಲಿ ನನ್ನೂರಿಗೆ  ನಾರ್ಮಲ್ ಅಲ್ಲದ ಯದ್ವಾತದ್ವಾ ಎಡಬಿಡಂಗಿತನದ
ಇವನನ್ನು ಸಂಪ್ರದಾಯಸ್ಥರ ಮಕ್ಕಳು, ಪೋಷಕರಿಗೆ ಹೆದರಿ ಹೆಚ್ಚಿನ ದೋಸ್ತಿ ಮಾಡಿಕೊಳ್ಳಲು ಮುಂದೆಬರದ ಕಾರಣಕ್ಕೋ ಏನೋ ಇವನು ಇಲ್ಲೂ ಎಡಬಿಡಂಗಿ ವರ್ತನೆ ತೋರಿಸಿಯೇಬಿಟ್ಟ . ಬಷೀರ , ಬಾಷ , ವರ್ಗೀಸ್ , ಕುರಿಯನ್ , ನಿಂಗ ,ಮಾದ ಎಲ್ಲರೂ ಇವನ ಬೆನ್ನಿಗಂಟಿಕೊಂಡವರೇ .' ಆ- ಈ' ಧರ್ಮಸ್ಥರ ನಡುವೆ ಒಂದು ಅಂತರ ಈ ಊರಿನಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿರುವಾಗ ಇವನುಮಾತ್ರ ಎಲ್ಲವನ್ನೂ ಗಾಳಿಗೆ ತೂರಿ 'ಜೈ'ಎಂದೇಬಿಟ್ಟಿದ್ದ . ಎಲ್ಲರಮನೆಗೂ ನುಗ್ಗಿ ಕವಳಕತ್ತರಿಸಿ ಬರುವ ಇವನಿಗೆ ಅದೆಷ್ಟೋಮಂದಿ ಎದುರಿಗೇ ಸಹಸ್ರನಾಮಾವಳಿ ಮಾಡುತ್ತಿದ್ದುದೂ ಉಂಟು . ಮತ್ತೆ, ಈ ಹಿಂದೆ ಹೇಳಿದಂತೆ ಹುರಿಮೀಸೆಯ ಮೇಲೆ ಕೈಯ್ಯಾಡಿಸಿ ತಣ್ಣಗೆನಕ್ಕು ನಡೆದುಬಿಡುವ ಇವನ ಪರಿಗೆ ನನ್ನಲ್ಲೊಂದು ವಿಸ್ಮಯ ಬಹುಷಃ ಈ ಘಟ್ಟದಲ್ಲೇ ಹುಟ್ಟಿದ್ದಿರಬಹುದು .  
              'ಥೂ , ಎಂತದೋ ಇದು . ಮಡಿಮೈಲ್ಗೆ ಅಂತ ಒಂಚೂರೂ ಇಲ್ಲ ನಿಂಗೆ . ಅದಕ್ಕೇ ಎಲ್ರ ಹತ್ರನೂ ಬೈಸ್ಕೋತೀ . ನಿಮ್ಮಪ್ಪಅಮ್ಮ ಅದ್ಹ್ಯಾಗ್ ನಿನ್ನ ಸೈಸ್ಕತಾರೋ .....ಹಾಳಾದವ್ನೇ ' ಅಮ್ಮ ಅದೆಷ್ಟೋಬಾರಿ ಇವನ ಪುಂಡಾಟಗಳಿಗೆ ಬೈದಿದ್ದಾಳೆ ಪ್ರೀತಿಯಿಂದ .' ಹಾಳಾದವನೇ' ಅನ್ನೋದಂತೂ ಎಲ್ಲರಮನೆಯಲ್ಲೂ ಮಕ್ಕಳಿಗೆ ಬೈಯ್ಯುವ ಪ್ರೀತಿಯ ಬೈಗುಳವೇ.. ಆದರೆ ಈಬಾರಿ ಮಾತ್ರ ಅಮ್ಮಂಗೆ ನಿಜಕ್ಕೂ ಕೋಪ ಕಟ್ಟಿತ್ತು . ಮತ್ತಿನ್ನೇನು , ದೇವರ ನೈವೇದ್ಯಕ್ಕೆಂದು ಮಾಡುತ್ತಿದ್ದ ಚಕ್ಕುಲಿಯೊಂದನ್ನು ಅನಾಮತ್ತು ಎತ್ತಿ ಬಾಯಿಗಿಟ್ಟರೆ .....
ಮಕ್ಕಳೇ ವಿಧೇಯರಾಗಿ ಕೈಕಟ್ಟಿದೂರ ನಿಂತಿರುವಾಗ , ಇವನು ಹೀಗೆ....ಅಮ್ಮನ ಹೊಟ್ಟೆಯೊಳಗಿಂದ ಚೂರು ಖಾರವಾಗಿ ಮಾತು ಹೊರಬಿದ್ದಿತ್ತು .                
'ದೇವ್ರು ದಿಂಡ್ರು ಎಲ್ಲ ಈ ಹೃದಯದಲ್ಲಿದೆ ರತ್ನಮ್ನೋರೇ , ಏನೋ ನೈವೇದ್ಯಕ್ಕಿಟ್ಟಿದ್ದನ್ನ ಆ ದೇವ್ರಿಗ್ ಕೊಡೋಮುಂಚೆ ಒಂಚೂರು ತಿಂದೆ. ಆತ್ಮನೂ ಪರಮಾತ್ಮನೇ ಅಂತೆ. ಎಲ್ಲರ ಹೃದಯದಲ್ಲೂ ದೇವರಿರ್ತಾನಂತೆ . ಅಂದ್ಮೇಲೆ ಇವತ್ತು ಈ ದೇವ್ರಿಗೆ ನೈವೇದ್ಯ ಮಾಡ್ದೆ ಅಂದ್ಕೊಳ್ಳಿ . ಆಮೇಲೆ, ಈ ದೇವ್ರಿಗೆ ನೈವೇದ್ಯಕ್ಕಿಡೋದು ತುಂಬಾ ಸುಲಭ . ಇವ್ನು ಮಡಿಮೈಲ್ಗೆ ಎಲ್ಲ ಕೇಳೋದೇಇಲ್ಲ.' ತಣ್ಣಗೆ ನಗುತ್ತಾ ಹೀಗೆಲ್ಲಾ ಉಡಾಫೆಯ 'ಮುತ್ತುಗಳನ್ನುದುರಿಸಿದ' ಈ ರಾಮಾಚಾರಿ ಅಪರಾವತಾರಿಯನ್ನೊಮ್ಮೆ ಅಮ್ಮ ಕೊಂಚ ದುರುಗುಟ್ಟಿ ಅಸಹಾಯಕಳಾಗಿ ನೋಡಿದಳು . ತಪ್ಪಿನ ಅರಿವು ಅವನಿಗಾಗಿರದೇ ಇರಲಿಲ್ಲ , ಹಾಳಾದವನು ಹಾಳು  ಚಪಲಕ್ಕೆ ಸಿಕ್ಕಿದ್ದ. ನಮ್ಮನೆಯಮೇಲೆ ಅವನಿಗೂ ತೀರಾ ಹುಚ್ಚಿನಪ್ರೀತಿ. ಅಮ್ಮನ ಸಂಕಟ ಅರ್ಥಮಾಡಿಕೊಳ್ಳದ ದಡ್ಡನೇನಲ್ಲ . ಕೆಲಸ ಮಿಂಚಿಹೋಗಿದೆ. ತತ್‍ಕ್ಷಣ ಎರಡೂ ಕೈಗಳನ್ನು ಕಿವಿಗೆ ಹಚ್ಚಿ ಉಠ್‍ಬೈಸ್ ಹೊಡೆದೇಬಿಟ್ಟ. ಕೋಪಗೊಂಡಿದ್ದ ಅಮ್ಮನ ಎದೆಯಾಳದ ಪ್ರೀತಿಯನ್ನ ಕಲಕಿಯೇಬಿಟ್ಟ. ಇನ್ನೂ ಬೈಯ್ಯಬೇಕೆಂದಿದ್ದ ಪದಗಳನ್ನೆಲ್ಲ  ಅಮ್ಮ ಮರೆತೇಹೋದಳು , ಮತ್ತೆ, ಹಾಳಾದವನೇ ಎಂದು ತುದಿನಾಲಿಗೆಯಲ್ಲಿ ಬೈಯ್ಯುತ್ತಾ ಎರಡು ಚಕ್ಕುಲಿ ಕೈಗೆ ಇಟ್ಟಾಗ , ಈ ಭಂಡಕೃಷ್ಣ ಮತ್ತೆ ಆ ಮರುಳುಗೊಳಿಸುವ ನಗುಸುರಿದು ಚಕ್ಕುಲಿಯ ಕುರುಕುರಿಸುತ್ತ ತಣ್ಣಗೆ ನಡೆದೇಬಿಟ್ಟಿದ್ದ. ಯಾಕೋ ಗೊತ್ತಿಲ್ಲ, ಮೊಟ್ಟಮೊದಲ ಬಾರಿಗೆ ಬಿಸಿಬಿಸಿ ಕಂಪನವೊಂದು ನನ್ನೊಳಗೆ ಮೇಲಿಂದ ಕೆಳತನಕ ಹರಿದಿದ್ದಂತೂ ಸುಳ್ಳೆನ್ನಲಾರೆ .                                                            
  * * * *
ನಾನು ಹೀಗೆಲ್ಲಾ ಹೇಳಿದಮೇಲೆ ನೀವು ನಿಜಕ್ಕೂ ಇವನನ್ನು ದುರ್ಗುಣಗಳದಾಸ ಎಂದುಕೊಂಡಿರುತ್ತೀರಾ ಅಥವಾ ತೀರಾ ಕೇಡಿಗ ಅಂತಲಾದರೂ ಭಾವಿಸುತ್ತೀರ .ಆದರೆ, ಹೊರಗೆ ಮುಳ್ಳಿದ್ದರೂ ಹಲಸಿನಹಣ್ಣು ಒಳಗೆಷ್ಟು ಸಿಹಿಯಲ್ಲವೇ....ಇವನೂ ಕೂಡ ಹಾಗೆಯೆ. ಹೊರ- ಜಗತ್ತಿಗೆ ಹೇಗೆಲ್ಲಾ ತೋರಿಕೊಂಡರೂ ಅಸಲಿಗೆ ಇವನು ಹಾಗಲ್ಲ . ಗುಣವಂತರೆನ್ನಿಸಿಕೊಂಡವರಿಗೂ ಇರದ ಒಳ್ಳೆ ಹೃದಯ , ಆದರ್ಶದ ಹುಚ್ಚು , ಸಹಾಯಮಾಡುವ ಮನಸು, ಅನ್ಯಾಯಕ್ಕೆ ಸಿಡಿದೇಳುವ ಖಡಕ್‍ತನ ಖಂಡಿತಾ ಇವನದಾಗಿತ್ತು . ಅದಕ್ಕೇ ನಾನವನ ರಾಮಾಚಾರಿ ಎಂದೇ ನೆನೆಸಿಕೊಳ್ಳುವುದು . ಊರಲ್ಲಿ ಯಾರದೇ ಮನೆಯ ಮದುವೆ , ಮುಂಜಿ ಕೊನೆಗೆ ಸಾವು ಯಾವುದಾದರೂ ಸೈ ಅಲ್ಲಿ ಎಂಥ ಕೆಲಸಕ್ಕೂ 'ನಾ ರೆಡಿ' ಎನ್ನುವ ಜಾತಿ . ಬಂಡಿಸಾಮಾನು ಬೇಕಾದರೂ ಹೊತ್ತುಸಾಗಿಸುವ ಆನೆಬಲ . ಕೆಲಸದಲ್ಲಿ ಮೇಲುಕೀಳು ಎನ್ನುವ ಪಂಚಾಯ್ತಿ ಇವನಿಗಿರಲಿಲ್ಲ .' ಬಾ' ಎನ್ನುವವರಿಗೆ 'ಇದೋ ಬಂದೆ ' ಎಂದೇ ಹೇಳುತ್ತಿದ್ದ . ನಾನು ಹೀಗೆಂದಾಕ್ಷಣ ಇವನು ಹಣದ ಸಹಾಯವನ್ನೂ ಮಾಡುತ್ತಿದ್ದ ಎಂದು ತಿಳಿಯಬೇಡಿ , ಖಂಡಿತಾ ಈ ಸಹಾಯ ಯಾರಿಗೂ ಇವನು ಮಾಡಿದ್ದಿಲ್ಲ . ಯಾಕೆಂದರೆ... ಸಿನಿಮಾಗಳಲ್ಲಿ ಇಂಥ ಕ್ಯಾರೆಕ್ಟರ್ ಗಳು ಯಾವಾಗಲೂ ಬಡವರಾಗೇ ಇರುತ್ತವೆ . ಹೀಗಿದ್ದರೇ ಜನಕ್ಕೆ ಒಂದುರೀತಿ ಇಷ್ಟವಾಗುವುದು . ಹಾಗೆಂದೋ ಏನೋ , ಸೃಷ್ಟಿಕರ್ತನೆಂಬ ಚಿತ್ರಬ್ರಹ್ಮ ಕೂಡ ಇವನನ್ನು ಬಡವನಾಗೇ ಈ ಭೂಮಿಗೆ ಕಳಿಸಿಬಿಟ್ಟಿದ್ದ . ಅಂದಮೇಲೆ ಈ ಸಹಾಯಕ್ಕೆ  ಮಾತ್ರ ಇವನೇ ಬೇರೆಯವರ ಮುಖ ನೋಡಬೇಕಿತ್ತು . ಇರಲಿ , ಇವನ ಪರೋಪಕಾರದ ಪ್ರವರ ನೋಡಿ ಹೇಗಿತ್ತು .
ನನ್ನೂರಲ್ಲಿ ಆಗ ನೀರಿಗೆ ತೀವ್ರಬರ ಬಂದಿದ್ದ ಬೇಸಿಗೆ . ಎಲ್ಲರಮನೆ ಭಾವಿಯೂ ಪಾತಾಳಕ್ಕೆ ಮುಖ ಮಾಡಿಯಾಗಿತ್ತು. ಒಂದೆರಡು ವರ್ಷಗಳಿಂದ ಇದೇ ಹಾಡಾಗಿದ್ದುದರಿಂದ ಅಂತೂಇಂತೂ ಊರಪುರಸಭೆ  ಸುತ್ತಮುತ್ತಲ ಆಧುನಿಕ ಆವಿಷ್ಕಾರಗಳ ಬಗ್ಗೆ ಚೂರು ಗಮನಹರಿಸಿತ್ತು . ಇದರ ಫಲವಾಗಿ ಆವರ್ಷ ನನ್ನೂರಿನ ಪೇಟೆಗೊಂದು , ಅಗ್ರಹಾರಕ್ಕೊಂದು ' ನಳಮಹಾರಾಜನ '[ನಲ್ಲಿ] ಆಗಮನವಾಗಿತ್ತು . ಹೊಸತಿನ ಆಕರ್ಷಣೆ , ನೀರಿನಹಸಿವಿನಿಂದ ಜನಕ್ಕೆ ಇದೊಂದು ಅತ್ಯಂತ ಪ್ರೀತಿಯ ತಾಣವಾಗಿಬಿಟ್ಟಿತು . ಆದರೆ ಇಲ್ಲಿ ನೀರುಹಂಚಲು ಕಾನೂನು ಏನಿಲ್ಲ . ನೀರುಬರುವ ಮೂರುಗಂಟೆಯಲ್ಲಿ ಸಿಕ್ಕಿದವರಿಗೆ ಸೀರುಂಡೆ , ಬಾಯಿದ್ದವರ ಮನೆಯ ಹಂಡೆ ಭರ್ತಿ . ಈಗ ಶುರುವಾಯಿತು ಜಟಾಪಟಿ . ಕಷ್ಟಸುಖ ಹಂಚಿಕೊಂಡು ನೆಮ್ಮದಿಯಾಗಿದ್ದ ಹೆಂಗಳೆಯರಲ್ಲಿ 'ತೂ ತೂ-ಮೈ ಮೈ ' ಗಳ ಆವಾಹನೆಯಾಯಿತು . ನನ್ನ ಮನೆಯ ಎದುರಿಗೇ ಇದ್ದ ಈ ನಲ್ಲಿಕಟ್ಟೆ ಈಗ ಹೊಡೆದಾಟ ಬಡಿದಾಟಗಳ ಗರಡಿಮನೆಯಾಗಿ ಮೆತ್ತಗಿದ್ದವರನ್ನು ಅಳಿಸುವ ತಾಣವೂ ಆಗಿಬಿಟ್ಟಿತು . ಎಲ್ಲರಿಗೂ ನೀರುಬೇಕು . ಆದರೆ , ಆ ಬಡಿವಾರಗಿತ್ತಿ-ಆ ಘಟವಾಣಿ ,ಅದೇ ಊರಿಗೊಬ್ಬಳೇ ಪದ್ಮಾವತಿ ಎಂದು ಮೆರೆಯುತ್ತಿದ್ದ, ಯಾರೊಡನೆಯೂ ಮಾತೇಆಡದೆ ಬಿಂಕ ತೋರಿಸುತ್ತಿದ್ದ ಜಲಜಾಕ್ಷಿಯ ಇದಿರು ನಿಲ್ಲುವವರಾರು . ಮನೆಯಲ್ಲಿ ಪಾರುಪತ್ಯ ಮಾಡುತ್ತಿದ್ದ ಅಭ್ಯಾಸ ಬೀದಿಯಲ್ಲಿ ಬಿಟ್ಟೀತೇ.....ಅವರು ತರುವ ಕೊಡಗಳು ಅಕ್ಷಯಕೊಡಗಳಾಗಿ ಒಂದರಹಿಂದೊಂದರಂತೆ ಮನೆಯಿಂದ ಬರುತ್ತಲೇಇದ್ದವು, ಅವರಮನೆಯ ನೀರಿನಹಸಿವು ತಣಿಯುವವರೆಗೆ ಮೊದಲೇ ಕಾದುನಿಂತವರೂ ಬಾಯಿಮುಚ್ಚಿ ತೆಪ್ಪಗಿರುವ ಅನಿವಾರ್ಯತೆ . ಇನ್ನು ಇಲ್ಲಿಗೆ ಗಂಡಸರಾರೂ- ಗಂಡುಮಕ್ಕಳ ಹೊರತು - ಬಾರದ ಸಂಪ್ರದಾಯ , 'ಗಂಡಸಿಗ್ಯಾಕೆ ಗೌರಿದುಃಖ' ಎನ್ನುವ ಕಾಲದ ಸಣ್ಣೂರು . ಸರಿ , ಜಲಜಾಕ್ಷಿ ಊರಿಗೊಬ್ಳೇ ಪದ್ಮಾವತಿ ಆಗಿಯೇಬಿಟ್ಟರು .                                              
ಪಕ್ಕದ ಊರಿನಲ್ಲಿ ಪದವಿಕಾಲೇಜಲ್ಲಿ ಓದುತ್ತಿದ್ದ ಈ 'ರಾಮಾಚಾರಿ' ಬೇಸಿಗೆರಜಕ್ಕೆ ಬಂದ . ನಲ್ಲಿಕಟ್ಟೆಯ ರಸವತ್ತಾದ ಮಾರಾಮಾರಿಯನ್ನೂ ಕಂಡ. ಎರಡೇದಿನ, ಊರಲ್ಲೆಲ್ಲಾ ಸುತ್ತಾಡಿ ಎಲ್ಲರಕಿವಿಯಲ್ಲೂ ಅದೇನೇನೋ ಉಸುರಿ ಬಂದ . ಮರುದಿವಸ ಅಲ್ಲೊಂದು ಮಹತ್ತಾದ ಘಟನೆ ನಡೆದೇಬಿಟ್ಟಿತು . ಮೊದಲೇ ಕೊಡ ಇಟ್ಟು ಹಕ್ಕುಸ್ಥಾಪಿಸಿ ನೀರುಬರುವ ಸಮಯಕ್ಕೆ ಅಲಂಕರಿಸಿಕೊಂಡುಬರುವ ಜಲಜಾಕ್ಷಿಯ ದುರಹಂಕಾರದ ಪ್ರತೀಕವಾದ ಕೊಡಗಳು ಉದ್ದನಿಂತಿರುವ ಕೊಡಗಳ ಸಾಲಿನ ಹಿಂತುದಿಯನ್ನು ಸೇರಿದವು . ನಲ್ಲಿಯಿಂದ ನೀರು ಫಳಕ್ ಎಂದು ಕೆಳಬೀಳುವ ಸಮಯ , ನಾರಿ ವೈಯ್ಯಾರದಿಂದ ಬಂದೇಬಿಟ್ಟರು . ಆದರೆ ಅವರ ಕೊಡವಿಲ್ಲ , ಬೇರೆಯಾರದೋ ಕೊಡಕ್ಕೆ ವರುಣನ ಪ್ರಸಾದ. ಕೆಂಗಣ್ಣಿನಲ್ಲಿ ಸುತ್ತನೋಡಿ  ಬಾಯಿಬಿಚ್ಚಬೇಕೆನ್ನುವಷ್ಟರಲ್ಲಿ..... . ಈಗ ಬಿಚ್ಚಿದ ದನಿ ಕೃಷ್ಣನದ್ದಾಗಿತ್ತು . 'ಇಲ್ಲಿ ಯಾರೂ ಕೊಡ ಇಟ್ಟುಹೋಗಿ ಜಾಗ ಕಾದಿರಿಸುವಂತಿಲ್ಲ. ಆ ಸಮಯದಲ್ಲಿ ಬಂದು ಕ್ಯೂ ನಿಲ್ಲಬೇಕು . ನಿಂತವರು ತಲಾ ಎರಡೆರಡು ಕೊಡ ಹಿಡಿದು ಬೇರೆಯವರಿಗೆ ಅವಕಾಶ ಕೊಡಬೇಕು . ಎಲ್ಲರ ಸರದಿ ಒಮ್ಮೆ ಮುಗಿದಮೇಲೆ ಇನ್ನೊಮ್ಮೆ , ಮತ್ತೊಮ್ಮೆ , ಮಗದೊಮ್ಮೆ ಇದೇ ಶಿಸ್ತಿನಲ್ಲಿ ನೀರುಹಿಡಿಯಬೇಕು . ಇದು ಯಾರ ಸ್ವಂತದ್ದೂ ಅಲ್ಲ . ಎಲ್ಲರಿಗೂ ಸಮಾನಪಾಲು '. ಮೀಸೆ ತಿರುವಿದ ಈ ನ್ಯಾಯದ ದನಿಗೆ ಎಲ್ಲರೂ ಹಿಗ್ಗಿದರು , ಆದರೆ ನಮ್ಮ ಜಲಜಾಕ್ಷಿಗೆ ಕೆಂಡಾಮಂಡಲ ಕೋಪ ನಖಶಿಖಾಂತ ಹೊತ್ತಿತು . ಹಿಂದಿದ್ದ ಕೊಡಗಳ ತಂದು 'ನೀನ್ ಯಾವ್ ಊರಿನ್ ದೊಣ್ಣೆನಾಯ್ಕನೋ ಹೀಗೆಲ್ಲಾ ಹೇಳೋಕೆ . ಹೋಗ್ ಹೋಗ್ ' ಎಂದು ಬೇರೆಕೊಡ ಕಾಲಿಂದ ತಳ್ಳಿ ತನ್ನದಿಟ್ಟಾಗ ಇವ ನಿಜಕ್ಕೂ ಹೆಡೆತುಳಿದ ನಾಗರಹಾವೇ ಆಗಿಬಿಟ್ಟ . ಮದಿಸಿದ ಹೆಣ್ಣು , ಆಂಗ್ರಿಯೆಂಗ್ ಮ್ಯಾನ್ ನಡುವಣ ರಸವತ್ತಾದ ಹಣಾಹಣಿ ಅಲ್ಲಿದ್ದವರಿಗೆಲ್ಲಾ ಬಿಟ್ಟಿ ಮನರಂಜನೆ ಒದಗಿಸಿತು. ಎಷ್ಟಾದರೂ ಇವ ಅಂಜದಗಂಡು . ಸಭ್ಯತೆಯ ವಾದಕ್ಕೆ ಬಗ್ಗದ ಆ ಕೆರಳಿದ  ಸರ್ಪಿಣಿಗೆ ಯಾರೂ ನಿರೀಕ್ಷಿಸದಿದ್ದ ಟ್ರೀಟ್‍ಮೆಂಟ್ ಕೊಟ್ಟೇಬಿಟ್ಟ.
        ಅನಾಮತ್ತಾಗಿ ಅವರನ್ನು ಹೀರೋನಂತೆ ಎತ್ತಿಕೊಂಡವನೇ ಅವರ ಮನೆಯೆಡೆ ನಡೆದೇಬಿಟ್ಟ . ಮನೆಯಲ್ಲಿ ಧಪ್ ಎಂದು ಕೆಳಹಾಕಿದವನೇ, 'ಊರಿಗೊಂದು ರೀತಿಯಾದರೆ ನಿಮಗೇ ಬೇರೊಂದು  ಎನ್ನುವಂತಿದ್ದರೆ ನೀವಲ್ಲಿ ಬರುವಂತಿಲ್ಲ. ಇದೇಕಡೆ, ನಾನಿನ್ನೂ ಎರಡುತಿಂಗಳು ಇಲ್ಲೇ ಇರ್ತೀನಿ. ಸುಧಾರಣೆಯಾದರೆ ಗುಡ್ , ಇಲ್ಲದಿದ್ದರೆ ಮತ್ತಿದೇ ಟ್ರೀಟ್‍ಮೆಂಟ್ . ಯೋಚ್ನೆ ಮಾಡಿ.' ಕೈಕೊಡವಿ ಹೊರನಡೆದವನ ದಂಗುಬಡಿದು ನೋಡಿದರು ಜಲಜಾಕ್ಷಿ . ಮಕ್ಕಳ ಎದಿರೇ, ಊರಿನ ಹೆಂಗಳೆಯರ ಎದಿರೇ ಈರೀತಿ ಮಾನಹರಾಜಾದಂಥ ಘಟನೆ . ಒಳಗಿದ್ದ ದರ್ಪ , ಅಹಂಕಾರ ಝಲ್ಲನೆ ಬೆವೆತು ನಡುಗಿತು .ಇಷ್ಟೇ,  ಮುಂದೆ ಮಕ್ಕಳು ಮಾತ್ರ ತಲೆತಗ್ಗಿಸಿಕೊಂಡು  ಬಂದು ಎರಡೇಕೊಡದ ಕಾನೂನಿಗೆ ಬಧ್ಧರಾಗಿರುವುದೇ ಇತಿಹಾಸವಾಯಿತು . ಮೊದಲೇ ಯಾರೊಂದಿಗೂ ಬೆರೆಯದಿದ್ದ ಜಲಜಾಕ್ಷಿ ಈಗ ಎಲ್ಲರಿಂದ ಮತ್ತಷ್ಟು ದೂರವೇ. 'ಆ ದುಷ್ಟ ಹಾಗೆ ನಡೆದುಕೊಂಡಾಗ ಒಬ್ಬರೂ ನನ್ನಸಹಾಯಕ್ಕೆ ಬರಲಿಲ್ಲ ' ಎಂದು ಇದ್ದ ಒಬ್ಬರೇ ಹತ್ತಿರದವರಲ್ಲಿ ಎಲ್ಲರನ್ನೂ ಹಿಗ್ಗಾಮುಗ್ಗಾ ಬೈದರಂತೆ . ಒಂದಂತೂ ನಿಜ , ಈ ಕೃಷ್ಣ ಎಂಬ ರಾಮಾಚಾರಿ ಕ್ಯಾರೆಕ್ಟರ್‍ನ ಅಲ್ಲಿಯತನಕ ಬೈಯ್ಯುತ್ತಿದ್ದವರೆಲ್ಲಾ ಆದಿನ ಮಾತ್ರ ಹಾಡಿಹೊಗಳಿದವರೇ . ಅಮ್ಮ ಮತ್ತೆ ಬೈದಳು ಪ್ರೀತಿಯಿಂದ , 'ಥೂ, ದುಷ್ಟಮುಂಡೇದೇ, ಗಂಡ್ಸಾಗಿ ಒಬ್ಬ ಹೆಂಗಸನ್ನ ಹಾಗೆಲ್ಲಾ ಮುಟ್ಟಿದ್ದೂ ಅಲ್ದೆ ಎತ್ತಿ ಹೊತ್ಕೊಂಡ್ ಹೋಗೋದಾ ..ಕೇಡಿಗ ಕಣೋ ನೀನು .' 'ಅಯ್ಯೋ ರತ್ನಮ್ನೋರೇ , ನಾನು ಗಂಡ್ಸಾಗಿದ್ದಿದ್ದಕ್ಕೇ ಅವ್ರನ್ನ ಹೊತ್ಕೊಂಡ್ ಹೋಗಿದ್ದು . ನಿಮ್ಮ ಹಾಗೆ ಹೆಂಗ್ಸ್ ಆಗಿದ್ದಿದ್ರೆ ದಿನಾ ಅತ್ಕೋತ , ನಲ್ಲಿನೀರೂ ಸಿಗ್ದೆ ಕಷ್ಟ ಪಡ್ಬೇಕಾಗ್ತಿತ್ತು . ಈಗ್ ನೋಡಿ , ನಲ್ಲಿಕಟ್ಟೇಲಿ ಜಗಳ ಇದ್ಯಾ , ನೀರು ಸಿಗ್ಲಿಲ್ಲಾ ಅನ್ನೋ ಪಂಚಾಯ್ತಿ ಇದ್ಯಾ... ನಿಮ್ಗೆಲ್ಲಾ ಒಳ್ಳೆದಾಯ್ತೋ ಇಲ್ವೋ ' 'ಅದೆಲ್ಲಾ ಸರಿ , ..'ಅಮ್ಮ ರಾಗ ಎಳೆದಳು .' ಎಲ್ಲಾನೂ ಈಗ ಸರೀಆಯ್ತು ' ತಣ್ಣಗೆ ನಗುತ್ತಾ ನಡೆದೇಬಿಟ್ಟ ಈ ರಾಮಾಚಾರಿ .    
ಇಂಥಾ ಘಟನೆಗಳು ನನ್ನೂರಲ್ಲಿ ಒಂದಿಷ್ಟು ನಡೆದಿದೆ . ಆಗೆಲ್ಲಾ ಇವನು ಮಾಡಿದ್ದು ಸೈ ಎನ್ನುವವರು ಒಂದಿಷ್ಟು ಮಂದಿಯಾದರೆ , ಅದರ ಇನ್ನೊಂದು ಮುಖದಲ್ಲಿ ಕಂಡ ಕೆಡುಕನ್ನೇ ಎತ್ತಿಹಿಡಿದು ಮತ್ತೆ ಅವನನ್ನು ಅಪಾಪೋಲಿ ಎಂದೇ ಜರೆಯುವಮಂದಿ ಇನ್ನಷ್ಟು . 'ಆ ದುಂಡುಮೈಯ್ಯ ಜಲಜಾಕ್ಷಿಯನ್ನ ಹೊತ್ಕೊಂಡ್ ಹೋಗೋ ಅಂಥ ಚಪಲ ಈ ಪುಂಡುಪೋಕ್ರಿಯಲ್ಲಿ ಯಾವಾಗಿಂದ ಇತ್ತೋಏನೋ ..ಈಗ ಹೀಗೆ ....' ಎಂದವರು, ಇವನೆಂಥಾ ಸಿಕ್ಕನ್ನ ಬಿಡಿಸಿದ್ದ ಅನ್ನೋದನ್ನೇ ನೆನೆಸಿಕೊಳ್ಳಲು ಸಿಧ್ಧರಿರಲಿಲ್ಲ . ಹೋಗಲಿಬಿಡಿ , ಇದಕ್ಕೆ ಇವನೇನೂ ತಲೆಕೆಡಿಸಿಕೊಳ್ಳದ ಡೋಂಟ್ ಕೇರ್ ಆಸಾಮಿ ಎಂದು ಈ ಹಿಂದೇ ಹೇಳಿದ್ದೀನಿ . ಒಟ್ಟಿನಲ್ಲಿ ಇವನಿಗೆ ಸರಿ ಎನಿಸಿದ್ದನ್ನ ಅವನದೇ ರೀತಿಯಲ್ಲಿ ಮಾಡುವುದೇ ಇವನ ಸ್ಪೆಷಾಲಿಟಿಯಾಗಿತ್ತು. ಒಳ್ಳೆಯದನ್ನು ಮಾಡುವಾಗಲೂ ಇವನು ಅನುಸರಿಸುವ ಮಾರ್ಗ ಚೂರು ಅಡ್ಡದಾರಿಯದೇ ಅನಿಸುವಮಟ್ಟಿಗೆ ಇರುತ್ತಿದ್ದುದನ್ನು ಗಮನಿಸುವ ವ್ಯವಧಾನವೇ ಇವನಲ್ಲಿರಲಿಲ್ಲ , ಎಷ್ಟಾದರೂ 'ಆಂಗ್ರಿ ಯೆಂಗ್ ಮ್ಯಾನ್' ಅಲ್ಲವೇ.....
* * * *
ಅಪಾಪೋಲಿ , ದುಷ್ಟ , ಪುಂಡ ,ಒರಟ ಹೇಗೇ ಕರೆಸಿಕೊಂಡರೂ ಒಂದು ವಿಷಯದಲ್ಲಿ ಮಾತ್ರ ಇವನಿಗೆ ಇವನೇ ಸಾಟಿಯಾಗಿದ್ದ. ಪಿಯುಸಿ ಯವರೆಗೆ ಮಾತ್ರ ಕಲಿವಸೌಲಭ್ಯವಿದ್ದ ನನ್ನೂರ ಶಾಲಾ , ಕಾಲೇಜಿನಲ್ಲಿ ಎಲ್ಲವೂ ಶಿಸ್ತುಮಯ . ಕಾಲವೂ ಹಾಗೆ , ಜನರೂ ಹಾಗೆ . ಆದರೆ , ಈ ಕೃಷ್ಣ ಮಾತ್ರ ಇಲ್ಲೂ ಅಪವಾದವೇ . ಮೊದಲೇ ಸರಿ , ಇನ್ನು ಶಾಲೆಕಾಲೇಜು ಅಂದರೆ ಗಂಭೀರವಾಗಿರುವ ಜಾಯಮಾನವೂ ಇವನದಲ್ಲ , ವಯಸೂ ಅಲ್ಲ . ಈ ಲೈಫ್ ಗೋಲ್ಡನ್ ಲೈಫ್ ಹೌದುತಾನೇ....ಹಾಗಾಗಿ ಹುಡುಗಿಯರ ಕೆಣಕುವ , ಕಣ್ಣುಹೊಡೆವ ನಿರಪಾಯಕಾರಿ ಚೇಷ್ಟೆಗಳ ಖಂಡಿತಾ ಮಾಡುತ್ತಿದ್ದ . ಬೈಯ್ಯುವವರು , ಉಗಿಯುವವರು , ಹೆಡ್ ಮಾಸ್ತರರಲ್ಲಿ ಅಹವಾಲು ಹೇಳುವವರಿದ್ದು , ಅದರ ಫಲವಾಗಿ ಪನಿಷ್‍ಮೆಂಟ್‍ಗಳ ಧಾರಾಳ ' ಉಡುಗೊರೆಗಳು ' ಸಿಕ್ಕಿಯೂ 'ಹಾಳಾದವನು ' ಒಮ್ಮೆಯಾದರೂ ಫೇಲ್ ಆಗಿದ್ದುಂಟಾ...ಊಹೂಂ , ಅದು ಹೋಗಲಿ , ಯಾವಾಗಲೂ ನೂರಕ್ಕೆ ಎಂಬತ್ತರಾಚೆಯ ಮಾರ್ಕುಗಳೇ ಇವನ ಜೇಬಿಗೆ . ಅಮ್ಮ ಒಮ್ಮೆ ಕೇಳಿದ್ದಳು , 'ಅಲ್ವೋ , ಮೂರ್ ಹೊತ್ತೂ ಅಲ್ಕೊಂಡೇ ಇರ್ತೀಯ . ಬರೀ ತರ್ಲೆ -ತಕರಾರು ಮಾಡ್ಕೊಂಡೇ ಕಾಲಕಳೀತೀಯ . ಅದ್ಯಾವಾಗ ಓದ್ತಿ  ಏನ್ ಕಥೆ .ಅಥ್ವಾ ಆ ಮೇಸ್ಟ್ರಿಗೆಲ್ಲ ರೋಪ್ ಹಾಕಿ ಹೀಗೆ ಮಾಕ್ರ್ಸ ತೊಗೋತೀಯೋ ಹ್ಯಾಗೆ ' ....
'ಅಯ್ಯಯ್ಯೋ ರತ್ನಮ್ನೋರೇ ಅಡ್ಡಬೀಳ್ತೀನಿ , ಹೀಗೆಲ್ಲಾ ಈ ವಿಷ್ಯದಲ್ಲಿ ಮಾತ್ರ ಮರ್ಯಾದೆ ಕಳೀಬೇಡ್ರಿ . ಅಂಥಾ ಕೆಟ್ಟಕೆಲ್ಸ ಮಾತ್ರ ಇದುವರ್ಗೂ ಮಾಡಿಲ್ಲ , ಮಾಡೋದೂ ಇಲ್ಲ . ನನ್ನ ನಂಬಿ ' ಯದ್ವಾತದ್ವಾ ಆಕ್ಟಿಂಗ್ ಮಾಡಿ ಎಲ್ಲರ ಹೊಟ್ಟೆಹುಣ್ಣಾಗಿಸುವಂತೆ ನಗಿಸಿಬಿಟ್ಟ . ಆದರಿದು ಸುಳ್ಳಲ್ಲ , ಈ ವಿಷಯದಲ್ಲಿ ಸತ್ಯವನ್ನೇ ಹೇಳಿದ್ದಾನೆ ಎನ್ನೋದು ಎಲ್ಲರಿಗೂ ಗೊತ್ತಿದ್ದ ಸತ್ಯವೇ ! ನಿಜಕ್ಕೂ ಅವನ ಬುಧ್ಧಿಮಟ್ಟ ಅಸಾಧಾರಣದ್ದಾಗಿತ್ತು . ಮತ್ತೂ ಹೇಳಿದ್ದ , 'ನೋಡಿ , ಬ್ರಹ್ಮ ಸೃಷ್ಟಿಮಾಡೋವಾಗ ನಿಧಾನವಾಗಿ ಕೂತು ಒಳ್ಳೆಯವರನ್ನ , ಕೆಟ್ಟವರನ್ನ ತಪ್ಪಿಲ್ಲದ ಹಾಗೆ ಮಾಡ್ತಾನೆ . ಆದ್ರೆ ನನ್ನ ಮಾಡೋವಾಗ ಅವ್ನಿಗೆ ಮೂಡಿರ್ಲಿಲ್ಲ ಅಂತ ಕಾಣ್ಸುತ್ತೆ . ಅದಕ್ಕೇ ಒಳ್ಳೆದು-ಕೆಟ್ಟದು ಎಲ್ಲಾನೂ ಚೀಲದಲ್ಲಿ ತುಂಬೋಹಾಗೆ ತುಂಬಿ ಭೂಮಿಗೆ ಕಳ್ಸ್‍ಬಿಟ್ಟಿದಾನೆ . ಅದಕ್ಕೇ ನಾ ಹೀಗೆ . ಎಡವಟ್ಟೂ ಹೌದು , ಬಂಗಾರವೂ ಹೌದು .....'
ರೂಮಲ್ಲಿ ಕೂತು ಪರೀಕ್ಷೆಗೆ ಓದುತ್ತಿದ್ದ ನನ್ನಕಿವಿಗೆ  ಈ ಎಲ್ಲ ಮಾತುಗಳೂ ಬಿದ್ದಿತ್ತು . ನನಗೆ ಲೆಖ್ಖ ಹೇಳಿಕೊಡಲು  ಬಂದವನಿಗೆ ಸಹಜವಾಗಿ ಎಂಬಂತೆ , 'ಛೇ, ಆ ದೇವ್ರು ನಿಧಾನಕ್ಕೆ ಕೂತು ನಿನ್ನ ಸೃಷ್ಟಿಸಬೇಕಿತ್ತು ಕಣೋ . ನೀನು ಕೆಟ್ಟೋನು ಅನ್ನಿಸ್ಕೋಬಾರ್ದಿತ್ತು .'ಎಂದೆ ಅಷ್ಟೆ . ಅದೇನಾಯಿತೋ ಅವನಿಗೆ ಒಂದುಥರಾ ನೋಡಿದ . ಕಣ್ಣಲ್ಲೊಂದು ಹೊಳಪುಕ್ಕಿತು . ಗಲಿಬಿಲಿಗೊಂಡ . ಎಣ್ಣೆನೀರೆರೆದು ಬೆನ್ನತುಂಬಾ ದಟ್ಟಕಪ್ಪುಕೂದಲ ಹರಡಿ ಕುಳಿತಿದ್ದ ಹದಿನಾರರ ಹರಯದ ನನ್ನನೊಮ್ಮೆ ಗಟ್ಟಿಹಿಡಿದು ಮೀಸಲು ಮುರಿಯದ ತುಟಿಗಳಿಗೆ ತುಟಿಯೊತ್ತಿಯೇಬಿಟ್ಟ . ಕ್ಷಣ ಅಷ್ಟೇ , ಸಹಜವಾದ . ಮತ್ತದೇ ಹಳೆಯ ಭಂಡತನದಲ್ಲಿ ,'ನಾನು ಒಳ್ಳೆಯವನೇ ಆಗಿದ್ದಿದ್ರೆ  ನೀನನ್ನ ಮದ್ವೆ ಮಾಡ್ಕೋತಿದ್ಯಾ ....?' ಕನಸಗಂಗಳಲ್ಲಿ ಕೇಳಿದ. ಭಯ, ನಾಚಿಕೆ ,ಇನ್ನೂ ಹೇಳಲಾಗದ ಸಿಕ್ಕುಗಳಲ್ಲಿ ,'ಥೂ , ಹಾಳಾದವ್ನೇ . 'ಎನ್ನುತ್ತಾ ಕೈಲಿದ್ದ ಪುಸ್ತಕದಲ್ಲೇ ಹೊಡೆದೆ . ಯಾಕೋ ಅವನು ಅವನಾಗಿ ಕಾಣಲೇಇಲ್ಲ . ಯಾವುದೋ ಗುಂಗಿಗೆ ಸಿಕ್ಕವನಂತೆ ಲೆಖ್ಖ ಹೇಳಿಕೊಡದೆ ಬಾಗಿಲಾಚೆ ನಡೆದೇಬಿಟ್ಟ . ಒಂದುವೇಳೆ ಹೇಳಿಕೊಡುತ್ತೇನೆಂದಿದ್ದರೂ , ಹೇಳಿಸಿಕೊಳ್ಳುವ ಮನಃಸ್ಥಿತಿಯಲ್ಲಿ ನಾನೂ ಇರಲಿಲ್ಲ .
ಹ್ಞಾಂ , ಇದನ್ನು ಕೇಳಿದಮೇಲೆ ನನಗೇನಾದರೂ ....ಅವನ ಬಗ್ಗೆ ಲವ್ವುಗಿವ್ವು ....ಇತ್ತಾ... ಎಂದು ಪ್ರಶ್ನಿಸಿದರೆ , ಖಂಡಿತಕ್ಕೂ ಇರಲಿಲ್ಲ . ಹರಯಕ್ಕೆ ಸಹಜವಾದ ಚೂರುಪಾರು ಕನವರಿಕೆ ಕಂಡಿದ್ದುಂಟು . ಆದರೆ , ಅವನೇಕೆ ಹೀಗೆ ಕೇಳಿದನೋ ಅದು ಇಂದಿಗೂ ಒಗಟೇ . ಆದರೆ...ಹೌದು ಆದರೆ , ಆದಿನ ಆತುಟಿಗಳ ಸಂಪರ್ಕಕ್ಕೆ ಸಿಕ್ಕ ನನ್ನ ತುಟಿಗಳು ಬೆಚ್ಚಗಾಗಿದ್ದನ್ನು ಯಾವಾಗಲಾದರೂಮ್ಮೆ ನೆನೆದರೆ , ಮತ್ತೆ ಬೆಚ್ಚಗಾಗುತ್ತಿದ್ದ ಅನುಭವವಂತೂ ನಿಜ ಎಂಬುದನ್ನು ಹೇಳಲು ಮುಜುಗರವಾದರೂ ನಿಜವಾಗಿತ್ತು .
.
                  * * *


               ಅಳೆದ ಕೆಲಸ ಮುಗಿದಿತ್ತು.  ಕೊಂಚಬಾಗಿದಬೆನ್ನು , ಬಿಳಿಚಿಕೊಂಡ ಮುಖ , ಠೀವಿಯಿಂದ
ತಿರುವುತ್ತಿದ್ದ ಹುರಿಮೀಸೆಯ ಜಾಗದಲ್ಲಿ ಹಣ್ಣುಮೀಸೆ , ತಲೆಯಲ್ಲಿ ಉಳಿದಿರುವ ಹತ್ತಿಪ್ಪತ್ತು ಬಿಳಿಯಕೂದಲು , 'ತುಂಬಾ ಬದಲಾಗಿದ್ದೀಯ ಕಣೋ '  ಎಂದೆ ಜೊಂಪೆಜೊಂಪೆ ಕಪ್ಪಗಿನ ಅಂದಿನ ಸುರುಳಿಕೂದಲ ನೆನೆಯುತ್ತ . ಅದೇಕೋ ಒಂದಿಷ್ಟು ಸಂಕಟ ಕೂಡ . 'ಹ್ಞುಂ , ವಯಸ್ಸಾಯ್ತಲ್ಲೇ ', 'ಸುಮ್ನಿರೋ , ಏನ್ ಭಾರಿ ವಯಸ್ಸು . ಐವತ್ತಾಯ್ತಾ ' ಕೇಳಿದೆ . 'ಹ್ಞುಂ ' ಎಂದು ಹುಳ್ಳಗೆ ನಕ್ಕವನೇ ' ನೀ ಮಾತ್ರಾ ನೋಡು ಹಾಗೇ ಇದ್ದೀ 'ಎಂದಾಗ ಯಾಕೋ ಅವನ ನೋಟ ನನ್ನ ತುಟಿಗಳ ಕೂಡ ಮಾತಾಡಿತೇ .....ಬೆದರಿದೆ. ಕ್ಷಣ ಅಷ್ಟೇ. ನನ್ನ ಬೆನ್ನಹಿಂದಿನಿಂದ ,
 ' ತಥ್, ಈ ಮನ್ಷ ಒಂದ್‍ಕ್ಷಣ ನಿಂತಲ್ ನಿಲ್ಲಲ್ಲ . ಎಲ್ ಹಾಳಾಗ್ ಹೋದ್ರೋ . ಸಾಕಾಗಿದೆ ಇವ್ರ ಸಾವಾಸ ... ಓ , ಇಲ್ಲಿದ್ಯಾ ಸವಾರಿ . ಇಲ್ಲೇನ್ರಿ ಮಾಡ್ತಿದೀರ ' ಎನ್ನುವ ಅತಿಗಡುಸಿನ ವ್ಯಂಗ್ಯದನಿಗೆ ಬೆಚ್ಚಿ ಹಿಂತಿರುಗಿದೆ . ಒರಟು ದನಿಯಂತೇ ಇರುವ ದಢೂತಿಹೆಂಗಸು . ಹೌದು , ಆಕೆ ಹೀಗೆ ಶಾಪ ಹಾಕುತ್ತಾ ಬಂದಿದ್ದು ಮತ್ತಾರಿಗೂ ಅಲ್ಲ , ಈ ಅಂಜದಗಂಡು ಕೃಷ್ಣನಿಗೇ . ಕಾಲಬದಲಾವಣೆಯಲ್ಲಿ ನಾನವನ ಬಹುಷಃ ಇಪ್ಪತ್ತೆರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಕಂಡಿರಲಿಲ್ಲ . ಮುಂಬಯಿಯಲ್ಲಿದ್ದಾನಂತೆ , ಅಂತರ್ಜಾತೀಯ ವಿವಾಹವಾಗಿರುವನಂತೆ , ಪತ್ನಿ ಅತಿಶ್ರೀಮಂತನ ಏಕೈಕಮಗಳಂತೆ , ಹೌದು , ಹೀಗೆಲ್ಲ ಗಾಳಿಸುದ್ದಿ ಕಿವಿಗೆ ಬಿದ್ದಿತ್ತು . ಈಗ......
'ಸರೂ , ಇವ್ರು ನಮ್ಮ ಮನೆಯೋರು .ಸುನೀತಾ ' ಪೆಚ್ಚುನಗೆ ಚೆಲ್ಲಿ ಕೃಷ್ಣ ಹೀಗೆಂದಾಗ ನಾನು ಫಕ್ಕನೆ ನಕ್ಕುಬಿಟ್ಟೆ . 'ಏ , ಏನೋ ಇದು . ಅವರು ಹೇಳಬೇಕಾದ್ದನ್ನ ನೀ ಹೇಳ್ತಿದ್ದೀ ......' ಮಾತು ಮುಗಿಸಲಾಗಲಿಲ್ಲ , ಅವರೆಡೆ ದೃಷ್ಟಿಹಾಯಿಸಿದವಳಿಗೆ ಆಮುಖದಲ್ಲಿ ಅತೀವಬಿಗು , ಅಸಮಾಧಾನ , ಕೆರಳಿಕೆ ಕಂಡು ತುಟಿಕಚ್ಚಿಕೊಂಡೆ. ಯಾಕೋ ಸಹಜವಾಗಿರಲು ಸಾಧ್ಯವಿಲ್ಲ ಎನ್ನಿಸಿಬಿಟ್ಟಿತು .
ಅಲ್ಲಿದ್ದ ಹತ್ತೇಹತ್ತು ನಿಮಿಷಗಳಲ್ಲಿ ಕೃಷ್ಣನ ಪೆಚ್ಚುಪೆಚ್ಚುನಗೆ ಹತ್ತಾರುಸಲ ಬಿಚ್ಚಿಕೊಂಡಿತ್ತು . ಏನೇನೋ ತೊದಲಿದ . ಮನೆಯೆಲ್ಲಿ ಎಂಬ ಪ್ರಶ್ನೆಗೆ , ಮನೆಗೆಬಾ ಎಂಬ ಆಹ್ವಾನಕ್ಕೆ ಗಲಿಬಿಲಿಯ ಎಂತೆಂತದೋ ಉತ್ತರ ಕೊಟ್ಟ . ಅದೆಷ್ಟೋ ವರ್ಷಗಳ ನಂತರ ಸಿಕ್ಕವನನ್ನು ಕೇಳಬೇಕೆಂದಿದ್ದ ಪ್ರಶ್ನೆ , ವಿವರಗಳ ಬಯಕೆಯೆಲ್ಲ ಉಕ್ಕಿಬಂದ ಉತ್ಸಾಹದಷ್ಟೇ ವೇಗವಾಗಿ ತಣ್ಣಗಾಯಿತು . 'ನಡೀರಿ , ಇನ್ನೂ ಕೆಲಸ ಇದೆ ' ,ಸೌಜನ್ಯಕ್ಕಾದರೂ ಒಂದಷ್ಟು ಮಾತನಾಡದೆ, ಹೀಗೆಹೇಳುತ್ತ ಹೆಚ್ಚುಕಮ್ಮಿ ಅವನ ಕೈಹಿಡಿದು ಎಳೆದುಕೊಂಡು ಹೊರಟಂತೆ ಹೊರಟಾಗ , 'ಬರ್ತೀನಿ ಕಣೆ ಸರೂ 'ಎನ್ನುತ್ತಾ ಬೆನ್ನುಬಾಗಿಸಿ ನಡೆದವನನ್ನು ನಾನು ಮೂಕಳಂತೆ ನೋಡಿದೆ .  'ಛೇ , ಎದೆಸೆಟೆಸಿ ನಡೆಯುತ್ತಿದ್ದ , ಹತ್ತಾನೆಯ ತೋಳ್ಬಲದ ಕೈಗಳ ಬೀಸಿನಡೆಯುತ್ತಿದ್ದ , ಮುಖದತುಂಬಾ ಸುಂದರನಗೆ ಚೆಲ್ಲಿ ಹುಡುಗಿಯರ ಲಬ್‍ಡಬ್ ಏರಿಸುತ್ತಿದ್ದ, ಅನ್ಯಾಯಕ್ಕೆ  ಕುದಿಯುತ್ತಿದ್ದ , ಆದರ್ಶಕ್ಕೆ ಸೋಲುತ್ತಿದ್ದ , ಹೆದರಿಕೆಯನ್ನೇ ಕಾಣದ ಆ 'ರಾಮಾಚಾರಿ ' ಕೃಷ್ಣನೇ ಇವನು .....
'ಏಯ್ ಕೃಷ್ಣ, ನೀನಲ್ಲ ಕಣೋ ಇದು' ಮನದಲ್ಲೇ ಹೇಳಿಕೊಂಡೆ . ಕೇಳಿಸಿತೆಂಬಂತೆ ತಿರುವಿನಲ್ಲೊಮ್ಮೆ ಹಿಂತಿರುಗಿದ. ಇಲ್ಲ, ಆ ನೋಟಕ್ಕೆ ಸಿಕ್ಕರೂ ನನ್ನ ಅಧರಗಳು ಬೆಚ್ಚಗಾಗಲೇ ಇಲ್ಲ. ಬಹುಷಃ ಕೃಷ್ಣನ ಮದುವೆಯಾದ ದಿನವೇ 'ರಾಮಾಚಾರಿ ' ಕಳೆದುಹೋಗಿರಬೇಕು. ಅವನಿಗಾಗಿ ನನ್ನಿಂದ ಒಂದು ನಿಟ್ಟುಸಿರ ಕಾಣಿಕೆ ಹೊರಬಿದ್ದಿತು .

* * * *
                                                         

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ