ಸೋಮವಾರ, ಮಾರ್ಚ್ 23, 2015

'ನಾರ್ವೇಜಿಯನ್ ಪರ್ಲ್'......ಎಂಬ ಮುತ್ತಿನ ಸುಂದರಿ

                

               ಟೈಟಾನಿಕ್ ಹಡಗಿನ ದುರಂತಕ್ಕೆ ಈಗಾಗಲೇ ನೂರು ವರ್ಷ ತುಂಬಿದೆ.  
ಈ ಸಂದರ್ಭದಲ್ಲಿ ಎಲ್ಲ ಮಾಧ್ಯಮಗಳಲ್ಲೂ ಬಿತ್ತರವಾದ ವಿಸ್ತ್ರುತ ವರದಿಯನ್ನು ಜನತೆ ವೀಕ್ಷಿಸಿತು . ವರದಿ , ಫೋಟೋಗಳು , ಕಥೆ , ಹಿನ್ನೆಲೆ , ಬದುಕುಳಿದವರ ಅನುಭವ...ಅಬ್ಬಾ ! ಈ ಹಿಂದೆಯೇ ನಾನು ಈ ಹೆಸರಿನ ಸಿನೆಮಾವನ್ನು ನೋಡಿದ್ದೆ .  ಆ 'ಟೈಟಾನಿಕ್ ' ಸಿನಿಮಾದಲ್ಲಂತೂ ಇಡೀ ಹಡಗಿನ ವೈಭವ , ಸಾಗರದ ಅಪಾರ ಜಲರಾಶಿಯ ಭವ್ಯತೆ ಎಲ್ಲ ಕಂಡಾಗ , ಛೇ, ಒಮ್ಮೆಯಾದರೂ ಈ ಹಡಗಿನ ಪ್ರವಾಸ ನನ್ನ ಪಾಲಿಗೆ ಸಿಕ್ಕುವುದೇ ಎಂಬ ಕನಸುಕಟ್ಟಿಕೊಂಡಿದ್ದೆ. 

       ಕನಸು ನನಸಾಗುವ ಕಾಲವೇನೋ  ಬಂದೇಬಿಟ್ಟಿತು. ಆಗಮಾತ್ರ ಮೈಯಲ್ಲೊಂದು ತೆಳ್ಳಗಿನ ನಡುಕ ಹುಟ್ಟಿಕೊಂಡುಬಿಟ್ಟಿತು . ಸಿನಿಮಾದಲ್ಲಿ ಆ ಹಡಗು ಮುಳುಗಲಾರಂಭಿಸಿದ ದೃಶ್ಯಗಳೇ ಕೂತಲ್ಲಿ ನಿಂತಲ್ಲಿ ಕಾಡಿಸಿ , ಹೋಗಲೇ ಬೇಡವೇ ಎಂಬ ಸಂದಿಗ್ಧವೇ ಹೈರಾಣಾಗಿಸಿತು. ಹಿಂದೆಯೇ , ಛೇ, ಇದೆಂಥ ಹುಚ್ಚುಕಲ್ಪನೆ . ಅವಘಡ ಹಣೆಯಲ್ಲಿ ಬರೆದಿದ್ದರೆ ಯಾರಿಂದ ತಪ್ಪಿಸಲಾದೀತು  ಎಂದು ಈ ಭ್ರಮೆಯ ಬಗ್ಗೆ ನಗುವೂ ಬಂದಿತು. ಇಂಥಾ ಅವಕಾಶ ನನ್ನದಾಗಿರುವಾಗ ಈ ಪೊಳ್ಳುಕಲ್ಪನೆಗಳಲ್ಲಿ ಹಿಂಜರಿತ ಇರಬಾರದು ಎಂದು ತಯ್ಯಾರಾದೆ. ಹೌದು , ಸುಂದರವಾದ ಹಿಮನಾಡು 'ಅಲಾಸ್ಕಾ'ಗೆ ನಾನು ಪ್ರವಾಸ ಹೊರಟೇಬಿಟ್ಟೆ.  ಯಾವುದರಲ್ಲಿ ಎನ್ನುವಿರಾ... ? 'ಮುತ್ತಿನ ಸುಂದರಿ ' ಅಂದರೆ 'ನಾರ್ವೇಜಿಯನ್ ಪರ್ಲ್' ಎಂಬ ಸುಸಜ್ಜಿತ, ವೈಭವೋಪೇತವಾದ ಹಡಗಿನಲ್ಲಿ ಬರೋಬ್ಬರಿ ಎಂಟುದಿನಗಳ ಯಾನ. ಇದೊಂದು ಕೇವಲ ಹಡಗಲ್ಲ, ಇಂದ್ರನಗರಿ, ಮಾಯಾಲೋಕ. ಬನ್ನಿ, ಇದು ಹೇಗಿದೆ ಎನ್ನುವುದನ್ನು , ಇದರಲ್ಲಿ ಪಯಣಿಸಿ ಕಂಡ 'ಅಧ್ಭುತಗಳ' ಕಿರುಪರಿಚಯದ ಝಲಕ್ಕನ್ನು ನೀವೂ ನೋಡಿ .

ನಾರ್ವೇಜಿಯನ್ ಪರ್ಲ್.....

                 ನಾರ್ವೇಒಡೆತನದ,  ಈ ಹೆಸರುಹೊತ್ತ  ವೈಭವೋಪೇತವಾದ , ಸುಸಜ್ಜಿತ ಹಡಗಿನ ರಚನೆ 2005ರಲ್ಲಿ ಪ್ರಾರಂಭವಾಗಿ ,ಮೊದಲಬಾರಿಗೆ 2006ರಲ್ಲಿ ಕಾರ್ಯ ಆರಂಭಿಸಿತು . ಈ ಹಡಗಿನ ಉದ್ದ  965 ಅಡಿ, ಅಗಲ 125 ಅಡಿ . ಇಲ್ಲಿರುವ ಡೆಕ್ಕುಗಳು ( ಅಂತಸ್ತು ) ಹದಿನೈದು . ಇದು  3000 ಮಂದಿ ಪ್ರವಾಸಿಗರು , 1100ರಷ್ಟು ಸಿಬ್ಬಂದಿವರ್ಗದವರನ್ನು ತನ್ನೊಳಗಿಟ್ಟುಕೊಂಡು ಪಯಣ ಪ್ರಾರಂಭಿಸುತ್ತದೆ . ಈ ಹಡಗಿನ ತೂಕ 93,502 ಟನ್ ಕೆ.ಜಿ.  ಹಡಗುಗಳ ನಿಲ್ದಾಣವನ್ನು ಪೋರ್ಟ್ ಎಂದೂ, ಒಂದೊಂದೇ ಹಡಗುನಿಲ್ಲುವ ಪ್ರತ್ಯೇಕ ಸ್ಥಳವನ್ನು ಪಿಯರ್ ಎಂದೂ ಕರೆಯುತ್ತಾರೆ .  
                 ಈ ಹಡಗುಗಳ ಪ್ರವೇಶವೂ ವಿಮಾನಪ್ರಯಾಣದಷ್ಟೇ ದೀರ್ಘ ನಿಯಮಗಳನ್ನು ಹೊಂದಿರುತ್ತದೆ . ಪೋರ್ಟ್‍ಗೆ ಬಂದಮೇಲೆ ನಾವು ನಮ್ಮ ಗುಂಪಿನ ಮ್ಯಾನೇಜರ್ ಜೊತೆ, ನಮ್ಮ ಲಗೇಜ್‍ಗಳಿಗೆ, ಅಲ್ಲಿ  ಕೊಡುವ ಟ್ಯಾಗ್‍ಗಳನ್ನು ಹಾಕಿ ಅಲ್ಲಿಯ ಸಿಬ್ಬಂದಿಗೆ ಕೊಟ್ಟರೆ ಮುಗಿಯಿತು.  ನಾವು ಫ್ರೀ . ಮುಂದೆ ಅವು ಸೇಫ್ ಆಗಿ ನಮಗೆ ಅಲಾಟ್ ಆಗಿರುವ ರೂಮಿಗೆ ನಾಲ್ಕೈದು ಗಂಟೆಯೊಳಗೆ ತಲುಪುತ್ತದೆ . ಈಗ ನಾವು ಉದ್ದುದ್ದದ ಎಸ್ಕಲೇಟರ್‍ಗಳನ್ನು  ಕ್ಯೂನಲ್ಲಿ ಏರಿ ಪಾಸ್‍ಪೋರ್ಟ ತಪಾಸಣೆಗೆ ನಿಲ್ಲಬೇಕು . ಚೆಕ್‍ಇನ್ ಕಟ್ಟಳೆ ಮುಗಿದಮೇಲೆ ಪಾಸ್‍ಪೋರ್ಟ ಅವರ  ಬಳಿಯಲ್ಲೇ  ಇಟ್ಟುಕೊಂಡು ನಮಗೆ 'ನೇಮ್‍ಕಾರ್ಡ್' ಎಂಬ ಬೇರೊಂದು ಕಾರ್ಡ್ ಕೊಡುತ್ತಾರೆ . ಇದು ಬಹಳಮುಖ್ಯ ,ಕಳೆಯುವಂತಿಲ್ಲ . ಕಾರಣ , ಇದು ಐಡೆಂಟಿಟಿ ಕಾರ್ಡ್ , ರೂಮ್ ಕೀ ಕೂಡ ಆಗಿರುತ್ತದೆ .  ಬೇರೆಬೇರೆ ಊರುಗಳಿಗೆ ನಮ್ಮ ಕರೆದೊಯ್ಯುವ ಹಡಗು ಪೋರ್ಟೊಂದರಲ್ಲಿ ಬೆಳಿಗ್ಗೆ ನಿಂತಾಗ , ಆ ಊರುನೋಡಲು ಹಡಗಿನಿಂದ  
ಹೊರಬರಲು ಈ ಕಾರ್ಡ್ ಮೆಷಿನ್ನಿನಲ್ಲಿ ತೂರಿಸಿ ಅದು ಯಸ್ ಎಂದು ತೋರಿಸಿದಮೇಲೇ ಹೊರಬಿಡುತ್ತಾರೆ , ಹಾಗೇ ಒಳಗೆ ಬರುವಾಗ ಕೂಡ . ಇನ್ನು ಹಡಗಿನೊಳಗೆ ಯಾವುದೇ 'ಕ್ಯಾಶ್' ವ್ಯವಹಾರವಿಲ್ಲ . ಹಾಗಾಗಿ ಇಲ್ಲಿಯೇ ನಮಗೆ ಬೇಕೆನಿಸಿದಷ್ಟು ಹಣಕಟ್ಟಿ 'ಕ್ರೆಡಿಟ್‍ಕಾರ್ಡ್' ಕೊಳ್ಳಬೇಕು . ಒಳಗೆ ಏನೇ ಕೊಂಡರೂ ಈ ಕಾರ್ಡಿನಲ್ಲೇ ವ್ಯವಹರಿಸಬೇಕು . ಬೇರೆಬೇರೆ ಊರುಗಳಿಗೆ ನಮ್ಮ ಕರೆದೊಯ್ಯುವ ಹಡಗು ಪೋರ್ಟೊಂದರಲ್ಲಿ ಬೆಳಿಗ್ಗೆ  ಆರೇಳು ಗಂಟೆಗೆ  ಬಂದುನಿಂತಮೇಲೆ ನಾವು ನಮ್ಮ ಬೆಳಗಿನ 'ತರಹೇವಾರಿ ತಿಂಡಿ'ಗಳ ಔತಣಮುಗಿಸಿ , ಆ ಊರನ್ನು ನೋಡಲು ಹೊರಬರುತ್ತೇವೆ . ಎಲ್ಲೆಲ್ಲಿ ಬೇಕೋ ಅಲ್ಲೆಲ್ಲ ಸುತ್ತಾಡಿ ಸಂಜೆ ಐದುಗಂಟೆಯ ಒಳಗೆ ಹಡಗನ್ನೇರಬೇಕು . ಮತ್ತೆ ಆರುಗಂಟೆಯೋ ಅಥವಾ ಕೊಂಚ ಆಕಡೆ ಈಕಡೆಗೋ ಇದು ತನ್ನ ಮುಂದಿನ ಗುರಿಯತ್ತ ಪಯಣ ಪ್ರಾರಂಭಿಸುತ್ತದೆ . 

                 ಇಲ್ಲಿ ಏನಿದೆ ಏನಿಲ್ಲ ಎಂದು  ಕೇಳಿದರೆ 'ಇಲ್ಲ' ಎನ್ನುವುದು ಮಾತ್ರ ಇಲ್ಲವೇಇಲ್ಲ . ಸಾವಿರಾರು ರೂಮುಗಳು, ಅತಿ ವಿಶಾಲವಾದ ರಿಸೆಪ್ಷನ್ ಡೆಸ್ಕ್, ಲಾಂಜ್ ಬಾರ್, ಹನ್ನೆರಡು ರೆಸ್ಟೊರಾಂಟ್‍ಗಳು , ಹದಿನಾಲ್ಕು ಬಾರ್‍ಗಳು , ಬಾಸ್ಕೆಟ್ ಬಾಲ್-ವಾಲಿಬಾಲ್- ರಾಕ್ ಕ್ಲೈಂಬಿಂಗ್ ಆಟಗಳ ಕೋರ್ಟುಗಳು, ಫಿಟ್‍ನೆಸ್‍ಸೆಂಟರ್ , ಜಾಗಿಂಗ್ ಟ್ರಾಕ್ , ಮಕ್ಕಳಿಗೆ,ದೊಡ್ಡವರಿಗೆ ಪ್ರತ್ಯೇಕ ಸ್ವಿಮ್ಮಿಂಗ್ ಪೂಲ್ , ಬ್ಯೂಟಿಪಾರ್ಲರ್ , ಯೋಗ , ಏರೋಬಿಕ್ಸ್ , ಕ್ಯಾಸಿನೊ , ಟೀನ್ ಸೆಂಟರ್, ಕಿಡ್ ಸೆಂಟರ್ , ಸುಸಜ್ಜಿತ ಲೈಬ್ರರಿ , ಬೌಲಿಂಗ್ ಕ್ಲಬ್ , ಥಿಯೇಟರ್ ಗಳು ಅಬ್ಬಬ್ಬಾ!  ಹೇಳಹೊರಟರೆ ಮುಗಿಯುವುದೇ ಇಲ್ಲ ಪಟ್ಟಿ .

                 ಇಲ್ಲಿ ನಾವು ಉಳಿದುಕೊಳ್ಳುವ ರೂಮುಗಳಂತೂ ಸಖತ್ ಮಜವಾಗಿರುವುದು . ಕಾಸಿಗೆ ತಕ್ಕಂತೆ ಗಾರ್ಡನ್‍ವಿಲಾ , ಡೀಲಕ್ಸ್ ಸೂಟ್ , ಓಷನ್ ವ್ಯೂ , ಬಾಲ್ಕನಿಸೂಟ್ , ಸ್ಟೇಟ್ ರೂಮ್ ಹೀಗೆ ವೈವಿಧ್ಯದ ರೂಮುಗಳು ಲಭ್ಯವಿವೆ . ಹೆಚ್ಚುದರದ ರೂಮುಗಳು  ವಿಶಾಲವಾಗಿದ್ದು ಬಾಲ್ಕನಿ ಅಥವಾ ಗಾಜಿನ ಕಿಟಿಕಿ ಇದ್ದು ಹೊರಗಿನ ಸಾಗರಸಂಭ್ರಮವನ್ನು ರೂಮಿನಲ್ಲಿ ಕುಳಿತು, ಮಲಗಿಯೂ ಎಂಜಾಯ್ ಮಾಡಬಹುದು . ಆದರೆ ಕಡಿಮೆದರದ ರೂಮುಗಳಿಗೆ ಈ ಸೌಲಭ್ಯವಿಲ್ಲ . ಈ ರೂಮುಗಳು ಎಂಟಡಿ ಅಗಲ ಹನ್ನೆರಡು ಅಡಿ  ಉದ್ದವಿದ್ದು  ಎರಡುಮಂಚ , ಬಟ್ಟೆಯಿಡುವ ಕಬೋರ್ಡ , ಪುಟ್ಟದಾದ ಬಾತ್‍ರೂಮು -ಟಾಯ್ಲೆಟ್ ಹೊಂದಿರುತ್ತದೆ. ಇಲ್ಲಿ ಕಿಟಿಕಿ ಇರುವುದಿಲ್ಲ .  ಹೊರಗಿನ ಪ್ರಪಂಚದಿಂದ ಪೂರ್ತಿಬೇರೆಯಾದಂತೆ, ಒಂದುರೀತಿ ತಾಯಗರ್ಭದಲ್ಲಿ ಕುಳಿತ ಮಗುವಿನ ಸ್ಥಿತಿಯಂತೆ ಎನ್ನಬಹುದು . ಲೈಟು ಹಚ್ಚಿದರೆ ಮಾತ್ರ ಬೆಳಕು . ಆದರೆ ಇಷ್ಟು ಪುಟ್ಟರೂಮಿನಲ್ಲೂ ಎಲ್ಲ ಸೌಕರ್ಯವೂ ಲಭ್ಯ. ಇವು ಚಕ್ರವ್ಯೂಹದಂತೆ ರಚಿತವಾಗಿರುತ್ತವೆ . ಒಳಗೊಳಗೆ ಫರ್ಲಾಂಗುಗಟ್ಟಳೆ ಉದ್ದುದ್ದ ಕಾರಿಡಾರ್‍ಗಳಲ್ಲಿ  ಹಾಗೊಮ್ಮೆ ಹೀಗೊಮ್ಮೆ ತಿರುಗುತ್ತ ,ಹಾಸಿದ ಸುಂದರ ಕಾರ್ಪೆಟ್ ಮೇಲೆ  ನಡೆದು ರೂಮು ಸೇರಬೇಕು . ಆದರೆ ಇದು ತುಂಬಾನೇ ಚೆನ್ನಾಗಿರುವುದು , ಕಾಲಿನಲ್ಲಿ ಬಲವಿರಬೇಕಷ್ಟೆ . ಇಡೀ ಹಡಗಿನ ಪರಿಚಯ ಮಾಡಿಕೊಂಡು ಒಬ್ಬೊಬ್ಬರೇ ಓಡಾಡುವ ಹಂತಕ್ಕೆಬರಲು ಕನಿಷ್ಟ ಎರಡುದಿನವಾದರೂ ಬೇಕು . 



                ಇಲ್ಲಿ ಹದಿನೈದು ಅಂತಸ್ತುಗಳಿವೆ -ಡೆಕ್- ಎಂದು ಈ ಹಿಂದೆ ಹೇಳಿರುವೆ . ಪ್ರತಿ ಡೆಕ್‍ನಲ್ಲೂ (ಐದನೇ ಡೆಕ್  ನಿಂದ ) ರೂಮುಗಳಲ್ಲದೆ ಎಲ್ಲಡೆಕ್‍ಗಳಿಗೂ ಹೋಗಲು ನಾಲ್ಕು ದೊಡ್ಡದೊಡ್ಡ ಲಿಫ್ಟ್ ಗಳು, ಸ್ಟೇರ್‍ಕೇಸ್‍ಗಳು ಸುಸಜ್ಜಿತ ರೆಸ್ಟ್ ರೂಮು (ಟಾಯ್ಲೆಟ್) ಗಳು ಹಡಗಿನ ಎರಡೂ ಬದಿಯಲ್ಲಿ ಇರುತ್ತವೆ . ಕೆಲವು ಡೆಕ್‍ಗಳು  ಲಾಂಜ್, ರೆಸ್ಟೊರಾಂಟ್, ಬಾರ್, ಥಿಯೇಟರ್, ಜಿಮ್, ಪೂಲ್ ಇತ್ಯಾದಿಗಳಿಗೇ ಮೀಸಲಾಗಿರುತ್ತದೆ. ಟಾಪ್‍ಡೆಕ್‍ನಲ್ಲಿ ದೊಡ್ಡದಾದ ಸ್ವಿಮ್ಮಿಂಗ್‍ಪೂಲ್, ಅದರಾಚೆ ಸುತ್ತಮುತ್ತ ಅಡ್ಡಾಡಿ ಹಡಗುಸಾಗುವ ವೈಭವ , ಸಾಗರದ ಮೇರೆಕಾಣದ ಜಲರಾಶಿ ಸೌಂದರ್ಯ ಸವಿಯಲು ಹೇರಳ ಸುಸಜ್ಜಿತವ್ಯವಸ್ಥೆಗಳಿವೆ. ಮೋಡಮುಚ್ಚದಿದ್ದರೆ ಸೂರ್ಯೋದಯ, ಸೂರ್ಯಾಸ್ತದ ರಂಗಿನ ಬೆಡಗನ್ನು ಮನಸಾರೆ ಅನುಭವಿಸಬಹುದು . ಇನ್ನು, ನಾವು  ನಮ್ಮ ರೂಮಿನಲ್ಲಿಯೇ ಕುಳಿತು , ಮಲಗಿ , ತಿಂದು ಕುಡಿದು ಮಾಡಬೇಕೆನ್ನುವ ಯಾವ ನಿಯಮವೂಇಲ್ಲ . ನೀವು ಇಂತಿಷ್ಟು ಹಣ ಪಾವತಿಸಿ ಒಮ್ಮೆ ಹಡಗುಹೊಕ್ಕಮೇಲೆ ಇಡೀ ಹಡಗು ನಿಮ್ಮದೇ . ಅಂದರೆ ನೂರಾರು ಅಡಿ ಉದ್ದದ ಓಪನ್‍ಡೆಕ್‍ನಲ್ಲಿರುವ ಆರಾಮಸೋಫಾಗಳು , ಲಾಂಜ್ , ಕ್ಲಬ್ , ಕಾರಿಡಾರ್ ಒಟ್ಟಿನಲ್ಲಿ ಎಲ್ಲೇಇರುವ ಕುಷನ್ ಸೋಫಾಗಳಲ್ಲಿ ನೀವು ಕುಳಿತು,ಮಲಗಿ , ಹರಟೆ, ಓದುವುದು , ತಿನ್ನುವುದು , ಏನಾದರೂಮಾಡಿ, ಯಾರೂ ಪ್ರಶ್ನಿಸುವುದಿಲ್ಲ . ಐದರಿಂದ ಮೇಲಿನ ಯಾವುದೇ ಡೆಕ್ಕಿಗೂ ಯಾವಸಮಯದಲ್ಲಿ ಬೇಕಾದರೂ ಹೋಗಿ ಓಡಾಡಿ , ಎಲ್ಲವೂ ನಿಮ್ಮದೇ ಜಾಗ . ಒಮ್ಮೆನಿಮ್ಮ ರೂಮಿನಿಂದ ಹೊರಬಂದರೆ ಮತ್ತೆ ಯಾವ ಕಾರಣಕ್ಕೂ ನೀವಲ್ಲಿ ಹೋಗುವ ಪ್ರಮೇಯವೇ ಬರುವುದಿಲ್ಲ . ತಿನ್ನಲು , ವಿಶ್ರಮಿಸಲು , ಫ್ರೆಶ್ ಆಗಲು , ಟಾಯ್ಲೆಟ್ ಉಪಯೋಗಿಸಲು ಯಾವ ಡೆಕ್ಕನ್ನಾದರೂ ಬಳಸಿಕೊಳ್ಳಬಹುದು . ಯಾವುದೇ ಥಿಯೇಟರ್, ಆಡಿಟೋರಿಯಮ್ , ಕ್ಲಬ್‍ಗಳಲ್ಲಿ ಸಿನಿಮಾ, ಮನರಂಜನೆ , ಲೆಕ್ಚರ್ ಗಳನ್ನು ಯಾವುದೇ ಹೊಸಖರ್ಚಿಲ್ಲದೆ ನೋಡಬಹುದು . ಇನ್ನು ತಿನ್ನಲಂತೂ ನಿಮ್ಮ ಹೊಟ್ಟೆಯಮಿತಿ, ಆರೋಗ್ಯಮಿತಿ ಈ ಎರಡೇ ಕಟ್ಟುಪಾಡು . ಯಾವ ರೆಸ್ಟೋರಾಂಟಿಗೆ ಯಾವ ಸಮಯದಲ್ಲಿ ಬೇಕಾದರೂ ಹೋಗಿ ಏನು ಬೇಕಾದರೂ ತಿನ್ನಿ. ಪ್ರಶ್ನಿಸುವವರು  ಯಾರೂ   ಇರುವುದಿಲ್ಲ . 

                ಇನ್ನು ಮನರಂಜನೆಯ ವಿಷಯಕ್ಕೆ ಬಂದರೆ  ನಾವಿಷ್ಟುಕಾಲ ಕಾಣದ ಎಲ್ಲ ವೈವಿಧ್ಯವನ್ನೂ ಈ ಸಾಗರಮಡಿಲಿನ ಐಷಾರಾಮಿಪಟ್ಟಣದಲ್ಲೇ ಕಾಣಬಹುದು . ಸಿನೆಮಾ, ಹಾಡು , ನೃತ್ಯ, ಆಟ, ಕಲಾಪ್ರದರ್ಶನ , ಸೆಮಿನಾರ್, ಲೆಕ್ಚರ್, ಎಲ್ಲವೂ ಇದೆ . ಆದರೆ ಎಲ್ಲವೂ ಅಂತರ್ರಾಷ್ಟ್ರೀಯಮಟ್ಟದ ಮನರಂಜನೆಗಳಾದ್ದರಿಂದ ಅವರಿಗೆ ಸಹಜವಾದ ರೀತಿಯ ಉನ್ಮತ್ತತೆ , ಬಿಚ್ಚುಡುಗೆಗಳು ಕೆಲವಲ್ಲಿ ಇದ್ದೇ ಇರುವುದು . ಮುಜುಗರಕ್ಕೆ ಇಲ್ಲಿ ಬರುವಾಗಲೇ ಗುಡ್‍ಬೈ ಹೇಳಿಬರುವ ಅನಿವಾರ್ಯತೆ ನಮ್ಮಂಥವರಿಗೆ . ಆದರೆ ಗುಣಮಟ್ಟದ ದೃಷ್ಟಿಯಲ್ಲಿ ಇವು ನಿಜಕ್ಕೂ ಗ್ರೇಟ್ . ಇಲ್ಲಿ ಐಷಾರಾಮಿಯಾಗಿ, ಯಾವುದೇಕಟ್ಟುಪಾಡಿಲ್ಲದೆ ಕಾಲಕಳೆವ ಮನಃಸ್ಥಿತಿಯವರು ಸಾಕಷ್ಟುಮಂದಿ ಬರುವುದರಿಂದ ಎಲ್ಲಕಡೆ ಧಾರಾಳವಾಗಿ ತುಂಡುಡುಗೆಗಳ ವೀನಸ್‍ದೇವತೆಯಂಥ ಹೆಣ್ಣುಗಳು, ಸ್ವಿಮ್ಮಿಂಗ್‍ಪೂಲಿನಲ್ಲಿ ಕಾಲಕಳೆವ  ಹೆಚ್ಚುಕಮ್ಮಿ ಹುಟ್ಟುಡುಗೆಯವರು ಕಂಡುಬರುತ್ತಾರೆ . ಹಾಗಿರುವುದು ಅವರ ಸಂಸ್ಕøತಿಯೂ ಹೌದಾದ್ದರಿಂದ, ನಾವೂ ಇದೆಲ್ಲ ಕಾಮನ್ ಎನ್ನುವಂತೆ ಕೆಲವೊಮ್ಮೆ  ಕಣ್ಣುಮುಚ್ಚಿಯೇ ನಡೆಯಬೇಕು .                      
                
ಆಹಾರವೈವಿಧ್ಯದ ಕಾರ್ಖಾನೆ...... 

        
ನಿಜ, ಈ ವಿಷಯದಲ್ಲಿ ಇದೊಂದು ಕಾರ್ಖಾನೆಯೇ . ಪ್ರಪಂಚದಲ್ಲಿ ಕಾಣುವ ಎಲ್ಲ ವೈವಿಧ್ಯವನ್ನೂ ಇಲ್ಲಿ ಕಾಣಬಹುದು ಮಾತ್ರವಲ್ಲ,  ಬಯಸಿದರೆ ಎಲ್ಲವನ್ನೂ ಸವಿಯುತ್ತ ಎಂಜಾಯ್ ಮಾಡಬಹುದು.   ಬಂದಿರುವುದೇ ಎಂಜಾಯ್‍ಮೆಂಟಿಗೆ ತಾನೆ....!
 ಈ ಕಾರ್ಖಾನೆ ಬಹುಷಃ ಮುಚ್ಚಿದ್ದೇ ನಾನುನೋಡಲಿಲ್ಲ . ಕೆಲವು ರೆಸ್ಟೊರಾಂಟ್‍ಗಳು ಮಧ್ಯರಾತ್ರಿಯ ನಂತರ ಒಂದೆರಡುಮೂರು ಗಂಟೆ ಮುಚ್ಚಬಹುದು , ಆದರೆ , ಹೊರಗಡೆ ಎಲ್ಲಡೆಕ್ಕಿನ ಎಲ್ಲಕಡೆ ಕಂಡುಬರುವ ಕಾಫಿ, ಟೀ , ಜೂಸ್ ಇತ್ಯಾದಿಕೌಂಟರ್‍ಗಳಿಗೆ ಬಂದ್ ಪ್ರಶ್ನೆಯೇ  ಇಲ್ಲ .  ಇವು ದಿನದ ಇಪ್ಪತ್ನಾಲ್ಕು ಗಂಟೆಯೂ ತೆರೆದಿರುತ್ತೆ . ಆಧುನಿಕವಾಗಿ ಅಳವಡಿಸಿರುವ ಕಾಫಿಮೇಕರ್‍ಗಳ ಗುಂಡಿ ಅದುಮಿದರೆ ಡಿಕಾಕ್ಷನ್ ಕಪ್‍ಗೆ ಬೀಳುತ್ತದೆ . ಟೀ ಬೇಕಾದರೆ ಇನ್ನೊಂದು ಬಾಕ್ಸ್ ನ ಗುಂಡಿ ಅದುಮಿದರೆ ಕುದಿವನೀರು ಬೀಳುತ್ತದೆ . ಕೆಳಗೆ ಟ್ರೇಗಳಲ್ಲಿರುವ  ಸಕ್ಕರೆ , ಡಿಪ್‍ಟೀ , ಜಗ್‍ನಲ್ಲಿರುವ ಬಿಸಿಹಾಲು ಹಾಕಿ ಅಲ್ಲಿಯೇ ಇಟ್ಟ ಕಡ್ಡಿ ತೆಗೆದು ಕಲಕಿದರೆ ಪಾನೀಯ ರೆಡಿ . ಹಾಗೇ ಹತ್ತಾರು ಬಾಕ್ಸ್ ಗಳಲ್ಲಿ ವಿಧವಿಧ ಜೂಸ್ ರೆಡಿ ಇರುವುದು . ಇಲ್ಲ , ಕುಡಿಯಲು ಹಾಲುಬೇಕೆ...? ಕೇಳಿದರೆ ಸಾಕಷ್ಟುದೊಡ್ಡ ಪಿಂಗಾಣಿ ಜಗ್ಗಿನಲ್ಲಿ ಬಿಸಿಬಿಸಿ ಹಾಲು ತಂದುಕೊಡುತ್ತಾರೆ . ಈಗಮಾತ್ರ ಅಲ್ಲ , ನೀವು ಪ್ರತಿಬಾರಿ ಟೇಬಲ್ ಮುಂದೆಕೂತಾಗಲೂ  'ವಾಂಟ್ ಮಿಲ್ಕ್ '? ಎಂದು ಕೇಳುತ್ತ  ಉಪಚರಿಸುತ್ತಾರೆ .ಇಲ್ಲಿನ ತರಹೇವಾರಿ ಹೋಟೆಲ್‍ಗಳಲ್ಲಿ ಪ್ರಪಂಚದ ಎಲ್ಲೆಡೆಯ ವೈವಿಧ್ಯವೂ ದೊರಕುವುದು .ಇಂಡಿಯಾದ ಚಪಾತಿ,ಪೂರಿ,ಉಪ್ಪಿಟ್ಟು ,ಇಡ್ಲಿ , ಪಲಾವ್, ಬದನೇಕಾಯಿ ಹುಳಿ, ಮಾವಿನುಪ್ಪಿನಕಾಯಿ ಇಂಥವೂ ಸಿಗುವುದು . ಕೆಲವೊಮ್ಮೆ ನಾವು ಇಂಥ ಪದಾರ್ಥ ಬೇಕೆಂದರೆ ಪ್ರಯತ್ನಿಸಿ ಮಾಡಿದ್ದೂ ಉಂಟು . ನಮ್ಮನ್ನು 'ಗೆಸ್ಟ್'ಗಳೆಂದೇ ಪರಿಗಣಿಸಿ ಉಪಚರಿಸಲು ಟೊಂಕಕಟ್ಟಿ ನಿಂತಿರುತ್ತಾರೆ . ಆದರೆ ನಮ್ಮಕೆಲವು ಅಡಿಗೆಗಳ ರುಚಿಮಾತ್ರ ಕೇಳಬೇಡಿ . ಪಾಪ , ನಮ್ಮನ್ನು ತೃಪಿಪಡಿಸಬೇಕೆನ್ನುವ ಅವರ ಕಾಳಜಿಗೆ ಮಾತ್ರ ಬೆಲೆಕಟ್ಟಬೇಕು .
                ಬೆಳಿಗ್ಗೆ  ಐದುಗಂಟೆಗೆಲ್ಲಾ ಬೆಳಗಿನ ತಿಂಡಿ ರೆಡಿ . ಡೈನಿಂಗ್‍ಹಾಲಿಗೆ ಪ್ರವೇಶಿಸುವಾಗ ಸ್ವಾಗತಿಸುವ ಹುಡುಗಿ ಕೈಲೊಂದು ಬಾಟಲಿಹಿಡಿದು , 'ವೆಲ್‍ಕಮ್ ವೆಲ್‍ಕಮ್'  ಹ್ಯಾಪಿ ಹ್ಯಾಪಿ ' ಎಂದು ರಾಗವಾಗಿ ಹೇಳುತ್ತ ನಗುನಗುತ್ತ ಕೈಗೆ 'ಹ್ಯಾಂಡ್ ಸ್ಯಾನಿಟೈಸರ್' ದ್ರವವೊಂದನ್ನು ಸ್ಪ್ರೇ ಮಾಡುತ್ತಾಳೆ . ಬೆಳಗಿಂದ ರಾತ್ರಿಯವರೆಗೂ ಅವಳದ್ದು ಇದೇ ಕೆಲಸ . ಪ್ರತಿಬಾರಿಯೂ ನಾವುಹೀಗೆ ಕೈತೊಳೆದೇ ಒಳಗೆ ಕಾಲಿಡಬೇಕು . 'ಶುಚಿತ್ವವೇ ದೇವರು' ತಾನೆ....?   ಅತಿವಿಶಾಲವಾದ ಈ ಡೈನಿಂಗ್ ಹಾಲಿನಲ್ಲಿ ನಿಮಗೇನು ಬೇಕು .... ಅನೇಕತರಹ ಬ್ರೆಡ್, ಓಟ್ ಗಂಜಿ, ಕಾರ್ನ ಫ್ಲೇಕ್ಸ್, ಕುದಿವಹಾಲು , ಬೆಣ್ಣೆ ,ಜೇನು , ಪೂರಿ ಸಬ್ಜಿ, ಸಲಾಡ್ , ದೋಸೆ , ಕರಿದ,ಹೆಸರು ಗೊತ್ತಿಲ್ಲದ ತಿಂಡಿಗಳು, ಹೆಚ್ಚಿಟ್ಟ- ಇಡಿಯ -ಹತ್ತಾರುಬಗೆಯ ಹಣ್ಣುಗಳು, ಡೆಸರ್ಟಗಳು , ಜೂಸ್, ಐಸ್ ಕ್ರೀಮ್,ಕಾಫಿ ,ಟೀ, ತಿನ್ನುವವರಿಗೆ ಅನೇಕ ತರಹದ ಮಾಂಸಾಹಾರ,  ಓಹ್.....ಪಟ್ಟಿಮಾಡಲು ಖಂಡಿತಾ ಸಾಧ್ಯವಿಲ್ಲ . ಬಿಸಿನೀರಲ್ಲಿ ಶುಚಿಯಾಗಿ ಜೋಡಿಸಿಟ್ಟ ಪಿಂಗಾಣಿತಟ್ಟೆ ತುಂಬಾ ಏನನ್ನುಬೇಕಾಧರೂ, ಎಷ್ಟು ಬೇಕಾದರೂ ತುಂಬಿಸಿ ಇದರಿಂದಾಚೆಯ ವೈಭವೋಪೇತವಾದ ಊಟದಜಾಗದಲ್ಲಿ ಅಂದವಾಗಿ ಜೋಡಿಸಿದ ಟೇಬಲ್ಲಿಗೊಯ್ದು ಕೂತರೆ , ಎದುರಿನ ಪೂರ್ತಿಗಾಜಿನ ಕಿಟಿಕಿಯಿಂದ ಕಾಣುವ ಸಮುದ್ರದ ಅಲೆಗಳ ಏರಿಳಿತ ನೋಡುತ್ತ ತಿನ್ನುವ ಮಜವೇ ಬೇರೆ. ಇಲ್ಲಿ ಶುಭ್ರನ್ಯಾಪ್‍ಕಿನ್‍ಗಳು , ಚಮಚೆ , ಫೋರ್ಕುಎಲ್ಲ ನೀವು ಬಳಸಿಇಡುತ್ತಿದ್ದಂತೆ ಅದನ್ನು ತೆಗೆದು ಬೇರೆ ಶುಭ್ರವಾದದ್ದನ್ನು ತಂದಿಡುತ್ತಲೇ ಇರುತ್ತಾರೆ . ಹೆಚ್ಚಿನವರು ಇಲ್ಲಿ ತಿನ್ನುವ ವೈಖರಿ ನೋಡಬೇಕು , ಒಂದೊಂದಕ್ಕೂ ಒಂದೊಂದು ತಟ್ಟೆ ,ಚಮಚ, ನ್ಯಾಪ್ ಕಿನ್ ಬಳಸಿಬಳಸಿ ಇಡುತ್ತಾರೆ. ಬೇಸರವಿಲ್ಲದೆ ಎಲ್ಲ ಟೇಬಲ್‍ಗಳ ಗಮನಿಸುತ್ತ ಶುಚಿಮಾಡುತ್ತಾರೆ ಈ ಸಿಬ್ಬಂದಿ . ಜೊತೆಗೆ ನಗುನಗುತ್ತ ಮಾತನಾಡಿಸಿ 'ಏನಾದರೂ ಬೇಕೆ' ಎನ್ನುತ್ತ , ಬೇಕಾದರೆ ತಂದುಕೊಡುವ ಅವರಸೇವೆ ನಿಜಕ್ಕೂ ನಮ್ಮನ್ನು ದಂಗುಬಡಿಸುತ್ತೆ . (ಆದರೆ , ಇದೆಲ್ಲಕ್ಕೂ ದುಡ್ಡುಪೀಕಿದ್ದು ನಾವೇ. ಇರಲಿ,)  ಹೀಗೆ ಆರಂಭವಾದ ಈ ಕಾರ್ಯಾಗಾರ ರಾತ್ರಿ ಹನ್ನೆರಡರವರೆಗೂ, ಇಂಥ ವೈವಿಧ್ಯಗಳ  ಜೊತೆ ಅನ್ನ.ಸಾಂಬಾರು ,ಪಲಾವ್ , ನೂರಾರು ತರಹದ ಸ್ವೀಟುಗಳು, ಇನ್ನೂ ನೂರಾರು  ತರಹದ ನಮಗೆ ಪರಿಚಯವಿರದ ಮನಕೆರಳಿಸುವ   ಆಹಾರಪದಾರ್ಥಗಳ   ಅಕ್ಷಯಪಾತ್ರೆಯಾಗಿ ಪ್ರವಾಸಿಗರನ್ನು ಹಿಂಡುಹಿಂಡಾಗಿ ಸೆಳೆಯುತ್ತಲೇ ಇರುತ್ತದೆ . ಇಲ್ಲಿಯ ಸಿಬ್ಬಂದಿಯಲ್ಲಿ ಇಬ್ಬರು ಕನ್ನಡಿಗರೂ ಇದ್ದಿದ್ದು ವಿಶೇಷವಾಗಿತ್ತು .                                                           

ಕಚಗುಳಿಯಿಟ್ಟ ಅನುಭವಗಳು .

             
ಬೆಳಿಗ್ಗೆ ನಾವು ರೂಮಿಂದ ಹೊರಹೋದ ಮೇಲೆ 'ಹೌಸ್ ಕೀಪಿಂಗ್ ' ಅಂದರೆ ರೂಮು  ಕ್ಲೀನ್ ಮಾಡುವ ಸಿಬ್ಬಂದಿ ಬರುತ್ತಾರೆ . ನಾವು ಸಂಜೆ ಬಂದಾಗ ರೂಮು ಝಳಝಳ ಎನ್ನುವಂತಿರುತ್ತೆ , ಇಷ್ಟೇ ಅಲ್ಲ ಹಾಸಿಗೆಯ ಮೇಲೊಂದು ನಾಯಿಯೋ, ಮೊಲವೋ , ಬಾತುಕೋಳಿಯೋ, ತೂಗಾಡುವ ಕಪಿಯೋ   ವಿಶ್ರಮಿಸುತ್ತಿರುತ್ತೆ . ಹ್ಞಾಂ, ಹೆದರುವ ಅಗತ್ಯವಿಲ್ಲ . ಕಾರಣ ಇದು ನಮ್ಮ ರೂಮಿಗಿಡುವ ಬೆಳ್ಳನೆಯ ಟರ್ಕಿಟವೆಲ್‍ನಿಂದ ಆ ಸಿಬ್ಬಂದಿಯ ಕೈಲಿ ರೂಪುಗೊಂಡ ಬೊಂಬೆ . ಲಾಂಜ್‍ನಲ್ಲಿ ಇದನ್ನು ಮಾಡುವುದು ಹೇಗೆಂಬ  ಕಲಾಪ್ರದರ್ಶನದ, ವಿಧಾನದ ಶೋಗಳೂ ನಡೆಯುತ್ತಿರುತ್ತದೆ .ಇದೊಂದು ಹೊಸತಾದ , ಚಂದದ ಕಲಾವೈವಿಧ್ಯವಾಗಿತ್ತು .  


              ಅದೊಂದುಬೆಳಿಗ್ಗೆ  ಹನ್ನೊಂದನೇಡೆಕ್ಕಿನ 'ಫಿಟ್‍ನೆಸ್ ಸೆಂಟರ್' ಗೆ ಹೋಗಿ ಟ್ರೆಡ್‍ಮಿಲ್ಲಿನಲ್ಲಿ ವ್ಯಾಯಾಮ ಮಾಡುತ್ತಿದ್ದೆ . ಮೂವತ್ತಕ್ಕೂ ಹೆಚ್ಚಿನ ಮೆಷೀನುಗಳಿರುವ ಈ ಜಿಮ್ ಪೂರ್ತಿ ಗಾಜಿನ ಆವರಣ ಹೊಂದಿದೆ . ಎಲ್ಲವೂ ಸಾಗರಾಭಿಮುಖವಾಗಿರುವುದರಿಂದ ಇಲ್ಲಿನಿಂತು ಕಸರತ್ತು ಮಾಡುತ್ತಿದ್ದರೆ , ಹಡಗುಸಾಗುವ ವೇಗಕ್ಕೆ ಸಮುದ್ರದ ಹೊಯ್ದಾಟ , ಏರಿಳಿವ ಪುಟ್ಟದೊಡ್ಡ ಅಲೆಗಳ ವೈಯ್ಯಾರ , ಭೂಮಿಕಾಣದ, ನೀರುಆಗಸ ಸೇರುವ ದಿಗಂತದಂಚು , ಅಪಾರ ಜಲರಾಶಿ ಕಣ್ಣೆದುರು ಮಾಯಾಪ್ರಪಂಚವನ್ನೇ ಸೃಷ್ಟಿಸಿತ್ತು . ನಾನೂ ಕಸರತ್ತು ಮಾಡುತ್ತ ಈ ಮತ್ತಿನಲ್ಲಿ ಮೈಮರೆತಿರುವಾಗಲೇ  ಹತ್ತಿರ ಬಂದಿದ್ದ ಅಲ್ಲಿಯ ಟ್ರೈನರ್. ಬಹಳ ವಿನಮ್ರತೆಯಿಂದ , 'ಮ್ಯಾಡಮ್ , ನೀವು  ಸೀರೆ ಹಾಗೂ ಚಪ್ಪಲಿಧರಿಸಿ ಟ್ರೆಡ್‍ಮಿಲ್‍ವರ್ಕ್ ಮಾಡುವುದಕ್ಕೆ ಇಲ್ಲಿ ನಿಷೇದವಿದೆ . ಇದು ನಿಮ್ಮ ರಕ್ಷಣೆಗಾಗಿ ಮಾತ್ರ ' ಎಂದ . ನಿಜ, ವೇಗವಾಗಿ ಓಡುವ ಯಂತ್ರದಮೇಲೆ ಸೀರೆ , ಚಪ್ಪಲಿ ಸಿಕ್ಕಿಕೊಳ್ಳುವ ಸಾಧ್ಯತೆಯಿರುವುದು . ನಾನು ಇಳಿದೆ . "ಮ್ಯಾಮ್ ಸಾರಿ ' ಎಂದ. ಅವನ ಕಾಳಜಿ, ವಿನಯ ಬಹಳ ಇಷ್ಟವಾಯಿತು . ಸರಿ ಎಂದು ಓಪನ್‍ಡೆಕ್ಕಿಗೆ ಬಂದವಳೇ ಅಲ್ಲಿದ್ದ  ಕಾಫಿಕೌಂಟರಿನಿಂದ ಕಾಫಿಬೆರೆಸಿಕೊಂಡು , ಕಾಲುಚಾಚುವ ಸೋಫಾದಲ್ಲಿ ಕುಳಿತೆ . ಸಾಗುವಹಡಗಿನ ವೇಗ , ಹಾದಿಕೊಡುವಂತೆ ಇಭ್ಭಾಗವಾಗುವ ನೀರು,  ಮೇರೆಯಿಲ್ಲದ  ಜಲರಾಶಿ, ಕೊಂಚ ಅಬ್ಬರದಲಿ ಬೀಸುವ ತಣ್ಣನೆಗಾಳಿ , ಕೈಲಿ ಬಿಸಿಬಿಸಿ ಆಹ್ಲಾದಕರವಾದ ಕಾಫೀ ಅಬ್ಬಾ.... ಜೊತೆಗೆ  ಸೂರ್ಯ ಈಗಷ್ಟೇ ನಗುನಗುತ್ತಾ  ಕಣ್ಣುತೆರೆದಿದ್ದರಿಂದ   ಸಾಗರಕನ್ಯೆಯ   ವೈಭವ ಇನ್ನೂ ಮೋಹಕವಾಗಿತ್ತು . ನೀರಮೇಲಣ ಎಳೆಯಕಿರಣಗಳಿಂದಾಗಿ  ಅಲೆಗಳನ್ನು ಬೆಳ್ಳಿಯ ಮೀನುಗಳಂತೆ ,ಹೊನ್ನಿನ ಎಲೆಗಳಂತೆ ಫಳ್ಳೆಂದು ಮಿಂಚಿಸುತ್ತ  ಮತ್ತೇರಿಸಿಯೇ ಬಿಟ್ಟಳು .  ಓಹ್ , ಇದೆಂಥ ಮರುಳುಗೊಳಿಸುವ ಸೌಂದರ್ಯವೆಂದರೆ ...ನಾನು , ನೀರು , ಈ ಹಡಗು ಇದಿಷ್ಟೇ ಸತ್ಯವೆನ್ನಿಸಿಬಿಟ್ಟಿತು . ಈ ಕ್ಷಣ ಅಸೀಮ ಚೆಲುವಿನದಾಗಿತ್ತು ..............................

              ಇಲ್ಲಿ ಏಳನೇಡೆಕ್ಕಿನ ರೆಸೆಪ್ಷನ್ ಜಾಗ ಇಡೀ ಹಡಗಿನ ಆಕರ್ಷಣೆಯಬಿಂದು . ನೆಲದಿಂದ ಛಾವಣಿಯ ಎತ್ತರ ಮೂರುನಾಲ್ಕು ಅಂತಸ್ತಿನಷ್ಟಿದ್ದು  ಇಢೀಜಾಗ ಅತೀವೈಭವದಲ್ಲಿ  ಅಲಂಕರಿಸಲಾಗಿದೆ . ಸಾಮಾನ್ಯವಾಗಿ ಪ್ರವಾಸಿಗರು ಇಲ್ಲಿ ಹರಟೆಹೊಡೆಯಲು , ಇಲ್ಲಿರುವ ಬೆಲೆಬಾಳುವ ಆಭರಣ , ಕಡಿಮೆಬೆಲೆಯ ಸೇಲ್ ನ ಒಡವೆಗಳು ,ವಾಚು , ಬ್ಯಾಗು ಇತ್ಯಾದಿ ವಸ್ತು ಗಳನ್ನು  ಕೊಳ್ಳಲು ನೆರೆದಿರುತ್ತಾರೆ . ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಫೋಟೋಗ್ರಾಫರ್‍ಗಳಿದ್ದು ಫೋಟೋತೆಗೆಸಿಕೊಳ್ಳುವವರ 'ಪೋಸ್ ' ನೋಡೋದೇ ಒಂದು ಟೈಮ್ ಪಾಸ್. ಇಲ್ಲಿಯೂ ಸಂಗೀತ , ಕುಶಲವಸ್ತುಗಳ ಮಾಡುವ ವಿಧಾನದ ಶೋಗಳಿರುತ್ತದೆ . ಗಾಜಿನಬಾಗಿಲು ತೆರೆದು ಹೊರನಡೆದರೆ ಓಪನ್‍ಡೆಕ್ಕಿನ   ಫರ್ಲಾಂಗಿನುದ್ದದ ಕಾರಿಡಾರ್, ಕಣ್ಣೆದುರು ಹೊಯ್ದಾಡುವ ಸಾಗರ , ಅದರಾಚೆ ಅಲಾಸ್ಕಾದ  ಹಿಮಪರ್ವತಗಳು , ಮಿಲಿಯಗಟ್ಟಳೆ ವರುಷಗಳಿಂದ ಹೆಪ್ಪುಗಟ್ಟಿನಿಂತ ಭಾರೀಗಾತ್ರದ ಗ್ಲೇಸಿಯರ್‍ಗಳು , ನಿಜಕ್ಕೂ ಅದ್ಭುತ , ಮನೋಹರದೃಶ್ಯಗಳನ್ನು ಅತೀ ಸಮೀಪದಲ್ಲೇ ಕಾಣುವಾಗ ನಾವು ಎಲ್ಲಿಯೋ ಕಳೆದುಹೋಗಿದ್ದಂತೂ ಸತ್ಯ .    

              ಒಂದುದಿನ, ಮಧ್ಯಾಹ್ನ ಊಟ ಮಾಡುತ್ತಿದ್ದಾಗ, ಈಗಾಗಲೇ ಪರಿಚಿತಳಾಗಿದ್ದ  ಸ್ಟೂವರ್ಡ್, ರುಮೇನಿಯಾದ ಹುಡುಗಿ 'ಜೆಸೆಂತ' ಬಂದವಳೇ , 'ಈ ರಾತ್ರಿ ಹತ್ತುಗಂಟೆಯ ಒಳಗೆ ಡಿನ್ನರ್ ಮುಗಿಸಿ . ಕಾರಣ , ರಾತ್ರಿ ಚಾಕೋಲೇಟ್ ಪಾರ್ಟಿ ಇದೆ . ಅದಕ್ಕೆ ಹತ್ತರಿಂದ ಹನ್ನೊಂದು ಗಂಟೆಯವರೆಗೆ ಡೈನಿಂಗ್‍ಹಾಲ್ ಮುಚ್ಚುತ್ತಾರೆ . ನೀವು ಎಂದೂ ಕಂಡಿರದ ನೂರಾರು ತರಹದ ಚಾಕೋಲೇಟ್ ಕಾಣಲಿದ್ದೀರಿ ಮತ್ತು ಎಷ್ಟುಬೇಕಿದ್ದರೂ ತಿನ್ನಬಹುದು . ಸ್ಟಾಫ್ ಇಂದ ಹಾಡು ನೃತ್ಯಕೂಡ ಇರುವುದು' ಎಂದಳು . ಈಥರ ಹೊಟ್ಟೆಬಿರಿಯ ತಿಂದಮೇಲೆ ಯಾರಿಗಾದರೂ ಮತ್ತೆ  ತಿನ್ನೋಕಾಗತ್ತಾ .. ಯಾರೂ ಬರಲಾರರು ಎಂದುಕೊಂಡೆ . ಆದರೂ,  'ತಿನ್ನದಿದ್ದರೇನಾಯ್ತು , ಹೇಗಿರುತ್ತೆ ಎನ್ನೋದನ್ನಾದರೂ ಕಣ್ಣಿಂದ ನೋಡೋಣವೆಂದು ಹನ್ನೊಂದುಗಂಟೆಗೆ ಹೋದರೆ ಓಹ್...ಲಿಫ್ಟಿನಿಂದ ಹೊರಬರಲು  ಜಾಗವಿಲ್ಲದಷ್ಟು ಜನರ ಕ್ಯೂ, ಕಾರಿಡಾರ್ , ಮೆಟ್ಟಿಲಿಂದ ಹಾದು ಅದೆಷ್ಟೋ ದೂರದವರೆಗೂ ಇತ್ತು . ನಾವು ಸಾಲಿಗೆ ನಿಲ್ಲದೆ ದೂರದಲ್ಲಿ ನಿಂತೆವು  ವೀಕ್ಷಕರಾಗಿ . ಸರಿಯಾಗಿ ಹನ್ನೊಂದಕ್ಕೆ ಬಾಗಿಲು ತೆರೆಯಿತು .  'ನಮ್ಮ ದೇಶದವರೇ ಅಶಿಸ್ತಿನವರು , ತಿನ್ನಲು ಹಾತೊರೆಯುವವರು ವಿದೇಶೀಯರು ಹಾಗಲ್ಲ ' ಎಂಬ ನಮ್ಮವರ ನಂಬಿಕೆಗೆ ವಿರುಧ್ಧವಾಗಿ ಅಲ್ಲಿ ನಿಂತಿದ್ದವರು , ಹಾಗೂ ಬಾಗಿಲು ತೆರೆಯುತ್ತಿದ್ದಂತೆ ಯದ್ವಾತದ್ವಾ ನುಗ್ಗಿದವರು ವಿದೇಶೀಯರೇ . ನಮ್ಮ ಮೇಲಿನ ದೂರು ಪೊಳ್ಳೆಂದು ಸಾಬೀತಾಗಿದ್ದಕ್ಕೆ ನನಗೆ ಖುಷಿಯಾಯಿತು . ಅಬ್ಬಾ ! ಅಲ್ಲಿದ್ದ ಚಾಕೋಲೇಟ್ ವೈವಿಧ್ಯ ಮಾತ್ರ ಹಿಂದೆ ಕಂಡಿಲ್ಲ ಮತ್ತೆ ಕಾಣುವುದೂ ಕಷ್ಟವೇನೋ . ಮೂರುನಾಲ್ಕು ತಟ್ಟೆಗಳಲ್ಲಿ ಪೇರಿಸಿ ಪೇರಿಸಿ ಕೊಂಡೊಯ್ಯುವವರ 'ಸ್ವೀಟ್ ಟೂತ್ ' ಬಗ್ಗೆ ಆಶ್ಚರ್ಯವೂ , ಅದರ ತಯ್ಯಾರಿಕೆ -ಕಲಾತ್ಮಕವಾಗಿ ಜೋಡಿಸಿರುವ ಆ ಸ್ಟಾಫ್ ನ ಶ್ರಮದಬಗ್ಗೆ  ಖುಶಿಯೂ ಆಯಿತು . ಹಡಗಿನ ಮತ್ತೊಂದು ವಿಶಿಷ್ಟ ಮನರಂಜನಾ ಪಾರ್ಟಿ ಕಂಡ ಅನುಭವ ನನಗಾಗಿದ್ದಕ್ಕೆ ರೋಮಾಂಚನವೂ ಆಯಿತು .

              ಮೊದಲು, ಈ ಯಾನಕ್ಕೆ ಹಡಗುಹತ್ತುವ ವೇಳೆ ಆ ವೈಭವದಲ್ಲಿ ಬೇರೇನೂ ಆಲೋಚನೆ ಕಾಡದಿದ್ದರೂ , ರಾತ್ರಿ ತಾಯಗರ್ಭಕ್ಕೆ ಮರಳಿದಂಥ ಆ ಒಳಗೊಳಗಿನ ರೂಮಿನಲ್ಲಿ ದೀಪಆರಿಸಿ ಮಲಗಿದಾಗ ಮತ್ತೆ 'ಟೈಟಾನಿಕ್ ' ಸಿನಿಮಾ ನೆನಪಾಯಿತು .  ನಿಜಕ್ಕೂ ಇಲ್ಲಿಯ ಅನುಭವ ಹೇಗಿತ್ತು ನೋಡಿ .! ಹೊರಗೆ ಮನ ಹುಚ್ಚೆಬ್ಬಿಸಿದ್ದ ಸಾಗರದ ಅಲೆಗಳ ಹೊಯ್ದಾಟ ಈಗ ಯಾಕೋ ಭಯ ಹುಟ್ಟಿಸಿಬಿಟ್ಟಿತು.  ಪೊಟ್ಟಣದಲ್ಲಿದ್ದಂತೆ ಇದ್ದರೂ ಹಡಗು ಸಾಗುವವೇಗ , ನೀರವ ರಾತ್ರಿಯಲ್ಲಿನ  ನೀರಿನ ಮೊರೆತ , ಅಲೆಗಳ ಹೊಯ್ದಾಟ ಸ್ಪಷ್ಟವಾಗಿ ತಿಳಿಯುತ್ತಿತ್ತು . ಅಲೆಏರಿದಾಗ ಅದರೊಡನೆ ಹಡಗು ಏರುವುದು , ಅಲೆಕೆಳಬಂದಾಗ ಅದರೊಡನೆ ಹಡಗೂ ಕೆಳಗಿಳಿಯುವುದು . ಇದು ಸಹಜ . ಆದರೆ ಇಳಿಯುವಾಗಿನ ಅನುಭವ....! ಹಡಗು ನೀರಿನೊಳಗೆ , ಆಳಕ್ಕೆ , ಇನ್ನೂ ಆಳಕ್ಕೆ ಇಳಿಯುತ್ತಿರುವಂತೆ ... ಪೂರ್ತಿ ಸಾಗರಗರ್ಭಕ್ಕೇ ಇಳಿಯುವಂತೆ , ಮತ್ತೆ ಮೇಲೆ ಬರಲಾರದೇನೋ.. 
ಎಂಬಂತೆ ನಡುಕ ಹುಟ್ಟಿಸಿಬಿಟ್ಟಿತು.  ನೀರುಜೀವಜಲ , ಆದರೆ ಮುನಿದರೆ....!  ....ಹೌದೇ ಹೌದು, ಪ್ರಕೃತಿಯ ಮುಂದೆ ಮನುಜ ಹುಲ್ಲುಕಡ್ಡಿಯೇ ಸರಿ .



             ಆದರೆ , ಈ ಭಯವೆಲ್ಲ ನಿರಾಧಾರ ಬಿಡಿ . ಈ ಪಯಣ ಅತ್ಯಧ್ಭುತ. ಮರೆಯಲಾರದ ರೋಮಾಂಚಿತ ಅನುಭವ . ನಾವುಕಳೆದ ಎಂಟುದಿನ , ಅಲ್ಲಿನ ವೈಭವ, ಅವರ ಉಪಚಾರ, {ನಮ್ಮಜೇಬು ಹಗುರ ಮಾಡಿಕೊಂಡರೆ ಮಾತ್ರ ) ನಮ್ಮ ಬದುಕಿನಹಾಳೆಯ ಮತ್ತೆಮತ್ತೆ  ಮಗುಚಿಹಾಕುತ್ತಾ ಓದಬಹುದಾದ ಸುಂದರಪುಟಗಳು . ಭೂಮಿಯ ಸಂಪರ್ಕವೇ ಇರದ ನೀರಿನಮೇಲಿನ ಈ ಕೃತಕನಗರಿಯ ಅನುಭವ ಬದುಕಿನಲ್ಲಿ ಒಮ್ಮೆಯಾದರೂ ಸಂದರ್ಭಸಿಕ್ಕರೆ ಅನುಭವಿಸಬೇಕು . ಆದರೆ,  ಇದು ಕೇವಲ ಒಂದು ಝಲಕ್ ಅಷ್ಟೇ . ತಂಬಿಗೆಯಲ್ಲಿ ತುಂಬಿ ಸಾಗರದ ನೀರು ಅಳೆಯಲಾದೀತೇ.......ಹಾಗೆ ಈಹಡಗಿನ ಅಧ್ಭುತಗಳ ಬಗ್ಗೆ ಪೂರ್ಣವಿಚಾರ ಬರೆಯುವ ತಾಕತ್ತೂ ನನ್ನದಲ್ಲ . ನನ್ನ ಅನುಭವಕ್ಕೆ ಸಿಕ್ಕಷ್ಟು ನಿಮಗೆ ....  
                  ಇಷ್ಟೆಲ್ಲಾ ಹೇಳಿದಮೇಲೆ ಇನ್ನೊಂದು ಸತ್ಯವನ್ನೂ ಹೇಳಿಬಿಡುತ್ತೇನೆ . ಎಂಟನೇದಿನಕ್ಕೆ ಬೇಸರವಾಗಿದ್ದೂ ನಿಜ . ನೀರೇನೋ ನೋಡಿದಷ್ಟೂ ತಣಿಸುತ್ತದೆ , ಆದರೆ , ಅದೇ ಹಸಿಬಿಸಿ ಬಿಚ್ಚಾಟದ ದೃಶ್ಯ, ಅದೇ ನೂರಾರು ತರಹದ ಊಟತಿಂಡಿ , ಅದೇ ವೈಭವ , ತಿರುತಿರುಗಿ ಅಲ್ಲಲ್ಲೇ ಗುರಿಯಿಲ್ಲದ   ಸುತ್ತಾಟ, ಕೆಲಸವಿಲ್ಲದೆ ಕಳೆಯುವಕಾಲ  ಯಾಕೋ ನನ್ನೂರಿನ ಜನ , ಅನ್ನ- ಖಾರದ ಬೇಳೆಸಾರು  ನೆನಪಾಯಿತು . ಹೌದು , ಎಲ್ಲೇ ಸುತ್ತಿದರೂ ಕೊನೆಗೆ 'ನಮ್ಮೂರೇ ಚಂದ ನಮ್ಮವ್ರೇ ಅಂದ , ಕನ್ನಡಭಾಷೆ ಕರ್ಣಾನಂದ ' ಎನ್ನೋದು ನಿಜವೇ ತಾನೇ.........ಈ ಪ್ರವಾಸಗಳು  ಬದುಕಿನ ಏಕತಾನತೆಗೆ   ಪರಿಣಾಮಕಾರಿ     ಮದ್ದು . ದುಡ್ಡಿದ್ದರೆ    ಅತ್ಯಗತ್ಯ .         ನಾಲ್ಕುದಿನಕ್ಕೆ  
ಚಂದವೋಚಂದ ಅಷ್ಟೆ .
                                         *              *

ಗುರುವಾರ, ಮಾರ್ಚ್ 19, 2015

ಚೈತ್ರ ಸಂಭ್ರಮ

            ಚೈತ್ರ ಸಂಭ್ರಮ 
       
            ಚೈತ್ರಚೆಲುವ  ಯುಗದ ಆದಿ ಬಂದಿದೇ ,
            ಶುಭಮುನ್ನುಡಿ   ಹೊಸ್ತಿಲಲಿ  ಬರೆದಿದೆ .... 


        ಮಾವು ಬೇವಿಗಷ್ಟು ಹಸಿರ ತುಂಬಿದೇ 
           ಹೊಂಗೆಯಲ್ಲಿ   ಹೂವಮಾಲೆ  ಇಳಿಸಿದೇ 
        ಭೃಂಗ ಸಂಗಕೆಳಸುವಂತೆ   ಕೆಣಕಿದೇ 
             ಕೋಗಿಲೆಗೆ 'ಕುಹೂ 'ದನಿ ನೀಡಿದೆ ........


       ಬಾಗಿಲಿಗೆ ತಳಿತೋರಣ ಕಟ್ಟಿದೇ   
       ಎದೆಗುಡಿಸಿ  ರಂಗವಲ್ಲಿ  ಬರೆದಿದೇ 
             'ಪ್ರೀತಿ ಬಿತ್ತಿ ಪ್ರೀತಿ ಬೆಳೆಸು' ಗುನುಗಿದೇ  
                 ಎದೆಯಲಿರಲಿ ಮನುಜತನ ಎಂದಿದೆ ....... 



           ಹಳತನೆಲ್ಲ  ಮರೆಯಬೇಕು  ಪಿಸುಗಿದೇ 
               ಹೊಸಸಂಭ್ರಮ ಹೊಸೆಯಿರೆಂದು ಕರೆದಿದೇ 
           'ಸಿಹಿ-ಕಹಿ ಸಮಚಿತ್ತ ತತ್ವ'  ಸಾರಿದೇ   
                     ವರುಷವರುಷ  ಬೆಳೆಯಿರೆಂದು  ಹರಸಿದೆ ....... 
                                   

ನನ್ನೀ  ಕವಿತೆಯೊಂದಿಗೆ  ಎಲ್ಲರಿಗೂ ಹಬ್ಬದ  ಶುಭ ಹಾರೈಸುತ್ತ  ಬ್ಲಾಗ್ ನಲ್ಲಿ  ಮುಂದಡಿಯಿಡುತ್ತಿರುವೆ.....   

-ಎಸ್ .ಪಿ. ವಿಜಯಲಕ್ಷ್ಮಿ 


                    -

ಬುಧವಾರ, ಮಾರ್ಚ್ 18, 2015

"ಬ್ಲಾಗಿಲು" ತೆರೆದಿರುವೆ


ಎಲ್ಲರಿಗೂ ನಮಸ್ಕಾರ .....
                  ಇಷ್ಟುಕಾಲ ಬ್ಲಾಗ್ ನ ಬಾಗಿಲ ಹಿಂದೆ ನಿಂತು ಕುತೂಹಲದಿಂದ  , ಅಕ್ಕರೆಯಿಂದ ಬರಹಗಳನ್ನು ಓದುತ್ತಿದ್ದ ನನಗೆ ನನ್ನ ಬರಹಗಳಿಗೂ ಬ್ಲಾಗೊಂದು ಬೇಕೆನ್ನಿಸುವ ತುಡಿತ ಹುಟ್ಟಿದ್ದೇ ಕಾರಣ , 'ಮಾಗಿಮಲ್ಲೆ 'ಯ ಬ್ಲಾಗಿಲು ತೆರೆದಿರುವೆ . ನನಗೆ ಏನನ್ನಾದರೂ ಕೊಡುವ ಆಸೆಯೂ , ಹಾಗೆ ಎಲ್ಲರ ಬರಹದ ಚಂದಗಳನ್ನು ಸ್ವೀಕರಿಸುವ ಆಸೆಯೂ ಇದೆ . ಮಲೆನಾಡಿನಿಂದ ಬಂದ ನನಗೆ ಅಲ್ಲಿಯ ಮುಗ್ಧ , ಮಾಸದ , ಹಸಿರ ಸೌಂದರ್ಯ ನಿರಂತರ ಕಾಡುವ ಕನಸು . ಮಾಗಿಕಾಲದ ಚುಮುಚುಮು ನಸುಕಿನಲ್ಲಿ ಮನೆಯ ಹಿಂದಣ ಅಂಗಳಕ್ಕೆ ದುಡುದುಡನೆ ಓಡುತ್ತಿದ್ದದ್ದು 'ಮಾಗಿಮಲ್ಲೆಯ ' ತೀರದ ಆಸೆಯಿಂದಲೇ . ಅಕ್ಕಪಕ್ಕದ ಅತಿಯಾಶೆಯ ಹೆಂಗಳೆಯರು ನನ್ನ  ಮಲ್ಲಿಗೆಯನ್ನೆಲ್ಲಾ ಕೊಯ್ದೇಬಿಟ್ಟಿರುವರಾ....? ಓಡುವ ಬಾಲೆಯ ಎದೆಯಲ್ಲಿನ  ಅಂದಿನ ಈ ಆತಂಕ ಈಗ ನಗೆ ಹುಟ್ಟಿಸುತ್ತದೆ . ನಿಜ , ವಯೋಮಾನಕ್ಕೆ ತಕ್ಕಂತೆ ಆತಂಕಗಳಿರುವುದು ಸೃಷ್ಟಿಧರ್ಮ .   

           ಇರಲಿ , ಗಿಡದಲ್ಲಿ ಅರಳಿರುತ್ತಿದ್ದ ಹೂಗಳು ಸಾಸಿರದ ಸಂಖ್ಯೆಯಲ್ಲಿ . ಹಸಿರೆಲೆಗಳ ನಡುವೆ ಬೆಳ್ಳಗೆ , ನವಿರು ಕಂಪ ಬೀರುತ್ತ ನನ್ನ ಸೆಳೆಯುತ್ತಿದ್ದವು . ಗಿಡದ ಕೆಳಗೆ ನಿಂತು , ಒಂದೇ ಒಂದು ಹೂವಿನ ತೊಟ್ಟು ಹಿಡಿದು ಸೆಳೆಯಹೊರಟರೆ  ಸಾಕು , ಒಹ್ ...!ತಪತಪನೆ ಮೈಮೇಲೆ ಸುರಿಯುತ್ತಿತ್ತು ಗಿಡದ ತುಂಬಾ ಆವರಿಸಿ ಮುತ್ತಿಡುತ್ತಿದ್ದ ಮಾಗಿ ಇಬ್ಬನಿಯ ಹನಿಗಳು . ಅಬ್ಬಬ್ಬಾ ... ಮೊದಲೇ ಮಾಗಿಕಾಲದ ನಡುಗಿಸುವ ಚಳಿ , ಜೊತೆಗೆ, ಹಿಮನೀರು ಸುರಿದಂತೆ ಇಬ್ಬನಿಯ  ತಬ್ಬುವಿಕೆ. ನಿಂತಲ್ಲೇ ಮರಗಟ್ಟಿದ ಅನುಭವವಾಗುತ್ತಿತ್ತು . 'ಅದೇನೇ ಈ ಚಳಿಯಲ್ಲಿ ನಿನ್ನ ಹುಡುಗಾಟ,  ಚಳಿ ದಂಡ  ಆಗುತ್ತೆ  ನೋಡು ,  ಬಿಸ್ಲು  ಬರುತನ್ಕ  ಕಾಯಕ್ಕಾಗಲ್ವಾ  ' ಅಪ್ಪ ಅಮ್ಮ ಪ್ರೀತಿಯಿಂದ ಬೈಯುತ್ತಿದ್ದರು . ಕಸು ತುಂಬಿದ್ದ ಬಾಲ್ಯದ ಮೈಮನಸ್ಸಿಗೆ ಇವೆಲ್ಲ ತಟ್ಟುತ್ತಿರಲಿಲ್ಲ . ಒಂದೊಂದೇ ಹೂಕಿತ್ತು ಉದ್ದನೆಯ ಲಂಗವನ್ನು ತುಸು ಮೇಲೆತ್ತಿ ಬುಟ್ಟಿಯಂತೆ ಬಾಗಿಸಿ , ತುಂಬುತ್ತಿದ್ದೆ , ಬೆಳ್ಳನೆಯ ನೂರಾರು ಹೂಗಳನ್ನು.... ಗಿಡವನ್ನೆಲ್ಲ  ಬರಿದಾಗಿಸುತ್ತಿದ್ದ ನನಗೆ , ಆ ತಾಯಮಡಿಲಲ್ಲಷ್ಟು ಹೂ ಉಳಿಸಿ ಅವಳ ಅಂದವನ್ನು ಕಂಗಳಿಂದ ಹೀರಿದರೆ ಸಾಕೆಂಬ ಪ್ರಜ್ಞೆ ಇರಲಿಲ್ಲ ..
             ಇಂದೂ ಈ ಚಿತ್ರಣ  ನನ್ನೆದೆಯಲ್ಲಿ ಮಾಸದ ಚೆಲುವಾಗಿಯೇ  ನಗುತ್ತಿದೆ . ಕಾಲಘಟ್ಟ ಇಂದು ನನ್ನನ್ನು ಬಹಳದೂರ ಕರೆತಂದಿದೆ . ಇಂದು ಮನೆಯಲ್ಲಿ ಅಂದಿನಂಥ ಅಂಗಳವಿಲ್ಲ . 'ಮಾಗಿಮಲ್ಲೆಯ ' ಗಿಡವಿಲ್ಲ . ಕೊಯ್ದು ನನ್ನ ಸೆರಗಿಗೆ ತುಂಬಲು ಹೂವಿಲ್ಲ . ಹೂವಿನ ಸ್ಪರ್ಶದ ಇಬ್ಬನಿಯ ಸೇಚನವಿಲ್ಲ . ಎಲ್ಲವೂ  ಅಧುನಿಕ ಸ್ಪರ್ಶದ ನಯಗಾರಿಕೆಯ ಬದುಕು . ಅದಕ್ಕಾಗಿ ಬೇಸರವೂ ಇಲ್ಲ. . ಬದುಕು ನಿಂತ ನೀರಲ್ಲವಲ್ಲ.... .! ಹರಿಯುತ್ತೆ ಹಾದಿ ಸಿಕ್ಕಂತೆ . ಈಗ ಬರಹವನ್ನು ಎದೆಗಪ್ಪಿಕೊಂದಿರುವೆ , ಒಂದೊಂದು ಬರವಣಿಗೆಯೂ ಅಂದು ಮಡಿಲ ತುಂಬುತ್ತಿದ್ದ 'ಮಾಗಿಮಲ್ಲೆ ' ಹೂವನ್ನು ನೆನಪಿಸುತ್ತದೆ . ಪ್ರಕಟಗೊಂಡಾಗ ಲಂಗದ ಬುಟ್ಟಿಗೆ 'ಹೂವೊಂದು '  ಬಂದುಬಿದ್ದಂತೆ , ಇಬ್ಬನಿಯ ತಂಪು ಸೇಚನವಾದಂತೆ ದೇಹ , ಮನಸ್ಸು ನವಿರಾಗಿ  ಕಂಪಿಸುತ್ತೆ ..... ಸಾಕಲ್ಲ ಇಷ್ಟು,  ಬರವಣಿಗೆಯ ಬಿಡದ ನಂಟಿಗೆ .  
             ಹೆಜ್ಜೆಯಿಟ್ಟಿರುವೆ . ಆ ನೆನಪು ನಿರಂತರವೆಂದು ಬ್ಲಾಗಿಗೆ 'ಮಾಗಿಮಲ್ಲೆ ' ಎಂದೇ ಹೆಸರಿಟ್ಟಿರುವೆ .
                                                            ಎಸ್ .ಪಿ. ವಿಜಯಲಕ್ಷ್ಮಿ