ಸೋಮವಾರ, ಮೇ 11, 2015

ಹೀಗೊಂದು ಪ್ರೇಮಕಥೆ


                                                              ಹೀಗೊಂದು ಪ್ರೇಮಕಥೆ 
ನೀ ಮುಡಿದಾ ಮಲ್ಲಿಗೆಹೂವಿನ ಮಾಲೆ......

'ಅಲ್ಲಿ ಅರಳಿದೆ ಹೂವು ಮಕರಂದ ತುಂಬಿ
ಇಲ್ಲಿ ಬಾಯಾರಿ ಹಾರಾಡುತಿದೆ ದುಂಬಿ.
ಅಂತರವೋ, ಮೈಲಿಮೈಲಿಗಳ ಕಂಬಿ
ಅಲ್ಲಾಡದಿರುವ ಕಬ್ಬಿಣದ ಕಂಬಿ
ದೇಶವನು ಕಾಲ ಗೆಲ್ಲುವುದೆಂದುನಂಬಿ
ಆಸೆ ಕುಳಿತಿಹುದಿಲ್ಲಿ ಸ್ವಪ್ನಚುಂಬಿ.' 
ಹೌದು,....ಇಂದಿಗೆ ತಿಂಗಳ ಕೆಳಗೆ....ನಿನ್ನನ್ನು ನಾನು ಮೊದಲಬಾರಿಗೆ ನೋಡಿದ್ದು....ಆ ದೇವಸ್ಥಾನದಲ್ಲಿ.  ಶಿವನ ಎದುರು  ಕೈಮುಗಿದು ನಿಂತ ನನ್ನ  ಕಣ್ಣೆದುರು ಮಿಂಚಿನಂತೆ ನೀನು ಹಾದುಹೋಗಿದ್ದೆ. ಮತ್ತೊಮ್ಮೆ ನೋಡಲು ಸಿಗಬಾರದೇ...?ಕ್ಷಣದಲ್ಲಿ ಕಂಪನ ಎಬ್ಬಿಸಿಹೋದ ನಿನ್ನನ್ನು ಕಾಣಿಸುವಂತೆ ಆ ವೈರಾಗ್ಯಪತಿ, ಮನ್ಮಥವೈರಿಯೆದುರು ದೀನನಾಗಿ ಮೊರೆಯಿಟ್ಟೆ. ನಿಜ, ನನ್ನ ಮೊರೆ ಅವನನ್ನು ತಾಕಿತು.ಎಷ್ಟಾದರೂ ಅವನೂ ರಸಿಕನೇ...ಹಾಗಿಲ್ಲದಿದ್ದಿದ್ದರೆ ಗಿರಿಜೆಯನ್ನು ತನ್ನ ತೊಡೆಯಮೇಲೇ ಕೂರಿಸಿಕೊಳ್ಳುತ್ತಿದ್ದನೇ...?ಎಲ್ಲೋ ಮಾಯವಾಗಿದ್ದ ನೀನು ಗಂಟೆಯ ಸದ್ದು ಕೇಳಿದೊಡನೆ ಮಂಗಳಾರತಿಗೆಂದು ಬಂದೆ. ಬಂದವಳು ....ಆಹಾ...ಬಂದವಳು ನನ್ನ ಕಣ್ಣೆದುರು, ಕೈಜೋಡಿಸಿ ನೀನು ನಿಂತ ಪರಿ...ಹೇಗಿತ್ತು ಗೊತ್ತಾ...
'ಚಂದ್ರಿಕಾ ಚಕೋರಿಯಾಗಿ
ಸೌಂದರ್ಯ ಸಾಂದ್ರೆಯಾಗಿ
ಪ್ರೇಯಸೀ ಪ್ರೇಯಸೀ'.....  
                     'ನಾನೆ ನಿನ್ನ ಪ್ರೇಯಸಿ' ಎನ್ನುವಂತೆ ಭಾಸವಾಗಿಬಿಟ್ಟಿತು. ಸುಳ್ಳಲ್ಲವೇ ಗೆಳತಿ....ನಿನ್ನನ್ನು ನಾ ಗೆಳತಿಯೆಂದೇ ಕರೆಯುತ್ತೇನೆ, ಸಧ್ಯಕ್ಕೆ. ಆನಂತರ....ಇರಲಿ, ನಿನ್ನನಲ್ಲಿ ಆ ಭಂಗಿಯಲ್ಲಿ ಕಂಡಾಗ ನನ್ನ ಹೃದಯಪಕ್ಷಿ ಪುಟ್ಟದನಿಯಲ್ಲಿ ಏನೆಂದಿತು ಗೊತ್ತಾ...? ಹೇಳಲೇ...? ಕೇಳಿದಮೇಲೆ 'ಛೇ, ಇವನೆಂಥ ನಾಚಿಕೆಗೆಟ್ಟವ ಎನ್ನಬೇಡ. ಪ್ರೀತಿಸಿದ ಮನಸುಗಳು ಜಗದ ರೀತಿಗಳನ್ನೆಲ್ಲಾ ಮರೆತುಬಿಡುವುದಂತೆ! 
'ಅಮೃತಕಲಶ ತೀರ್ಥಜಲದ
ಮಧುರವಕ್ಷ ಮೃದುಸ್ಥಲದಿ
ಮಲಗಿಸೆನ್ನ ಮುದ್ದಿಸು
ರಸೋನಿದ್ರೆಗದ್ದಿಸು '  
                                 ಕವಿಯಲ್ಲದಿದ್ದರೂ  ಕವಿಮನಸ್ಸು  ನಿನ್ನ  ನೋಡುತ್ತ,  ಮಾನಸಿಕವಾಗಿ  ಹೀಗೆಲ್ಲ  ಕನವರಿಸುತ್ತ      ಅಂಜಲೀಬದ್ಧವಾಗಿ  ನಿನ್ನೆದುರು  ಮಂಡಿಯೂರಿಬಿಟ್ಟಿತು.  ನಾನು  ತಪ್ಪು  ಮಾಡಿದೆನೇ... ನಿಂತಿದ್ದು ತಪೋಮೂರ್ತಿ ಶಿವನ ಇದಿರು,  ಕಲ್ಮಶಕಳೆವ  ವಿರಕ್ತಮೂರ್ತಿಯ  ಇದಿರು,  ಆದರೆ,  ಚಂಚಲಮನ... ಕಲಕಿದಹೃದಯ...  ಪ್ರಣಯಾಲಾಪ...ಹೌದು ಹುಡುಗೀ,  ಈ  ತಾಕಲಾಟ  ಎದೆಯಲ್ಲಿ  ಹರಿದಾಡಿತು. ಆದರೆ,  ಹರೆಯದ  ಹಸಿಬಿಸಿ  ಗೆದ್ದಿತು. ನಾನು ನಿಜಕ್ಕೂ ಆ ದಿನ ಶಿವನ ಭಕ್ತನಾಗಿರಲಿಲ್ಲ,  ಪ್ರೀತಿಗೊಳದಲ್ಲಿ  ಏಕಾಏಕಿ  ಬಿದ್ದಿದ್ದೆ,  ತುಂಬು  ಯವ್ವನಗಾರ್ತಿಯ  ಪ್ರಣಯಾರ್ಥಿಯಾಗಿದ್ದೆ. 
                ನೀನು  ಆ ದಿನ  ಉಟ್ಟಿದ್ದೆ  ಕಡುನೀಲಿಬಣ್ಣದಸೀರೆ.  ದುಂಡುಮುಖದಲ್ಲಿ ಕೆಂಪುಕುಂಕುಮ,  ಗಗನಗೌರಿಯ ಹಣೆಯಮೇಲಿನ   ಮುಂಬೆಳಗಿನ   ಓಕುಳಿಯಸೂರ್ಯನಂತಿತ್ತು.  ಉದ್ದನೆಯ  ನೀಳ ಎರಡುಜಡೆಯಲ್ಲಿ ಮಲ್ಲಿಗೆಹೂವಿನಮಾಲೆ, ಕಾಡಿಗೆಹಚ್ಚಿದ  ಕಪ್ಪುಹೊಳೆವ  ಕಣ್ಣುಗಳು,  ದಂತಬಣ್ಣದ  ದುಂಡುಕೈಗಳಲ್ಲಿ  ಕಿಣಿಕಿಣಿಸುವ  ಹಸಿರುಬಳೆ, ಹಾಲುಹುಣ್ಣಿಮೆಯ ಕೆನ್ನೆಯ ಮೇಲೆ  ಇಳಿಬಿದ್ದ ಆ  ಗುಂಗುರು ಮುಂಗುರುಳು,  ಎಲ್ಲಕ್ಕಿಂತ... ಮೆಲ್ಲಗೆ  ಗುಣಿಗುಣಿಸುತ್ತಿದ್ದೆಯೇನೋ ಹಾಡೊಂದನ್ನು, ಸ್ವಲ್ಪವೇ  ತೆರೆದುಮುಚ್ಚುತ್ತಿದ್ದ ಆ...ಆ... ಸಪೂರ ಚೆಂದುಟಿಗಳು.    ..ನಿಜಕ್ಕೂ  ನನ್ನೆದೆಯಲ್ಲಿ  ಹುಚ್ಚೆದ್ದು  ಕಾಡಿದ ಭಾವಗಳು ಎಷ್ಟು ಗೊತ್ತಾ...? ಅಂದಮೇಲೆ ಮೇಲಿನ ಕವಿಸಾಲುಗಳ ನಾ ಹಚ್ಚಿದ್ದು ಪೋಲೀತನವೆನ್ನುತ್ತೀಯಾ...?
ಓಹ್....! ನಾನು ಬರೆಯುತ್ತಿರೋದು ಪ್ರಥಮಪತ್ರ.....ಹಾಂ, ನಿನಗಾಗಿ ಪ್ರಥಮ ಪ್ರಣಯಪತ್ರ,.  ನಾನು ಈಗಷ್ಟೇ ಕಂಡು, ಕಂಡವಳಿಗೆ ನನ್ನ ಪರಿಚಯವನ್ನೂ ಮಾಡದೆ, ಹೀಗೆಲ್ಲಾ......ಖಂಡಿತಾ ತಪ್ಪು ಗೆಳತಿ. ನಾನೊಬ್ಬ ಸಭ್ಯ, ಸಹೃದಯ, ಶಿಷ್ಟಾಚಾರವಿರುವಂಥ ಹುಡುಗ. ನಿನಗೆ ಪರಿಚಯವಿರುವ ಮನೆಯವನೇ. ನೀನೊಪ್ಪಿದರೆ, ನಿನ್ನನ್ನು, ತೆರೆದಿಟ್ಟಿರುವ ಈ ಎದೆಗೂಡಿನೊಳಗೆ  ಮಲ್ಲಿಗೆಹೂವಿನಷ್ಟು  ಹಗುರವಾಗಿ,  ಪ್ರೀತಿಯಿಂದ  ಬಚ್ಚಿಟ್ಟುಕೊಳ್ಳುತ್ತೇನೆ. ಹೆಜ್ಜೆ ನೋಯದಂತೆ, ಕಾಲ್ಗೆಜ್ಜೆ ಉಲಿಯುತ್ತಲೇ ಇರುವಂತೆ, ಚಂದ್ರಮನ ಚಕೋರಿಯಂತೆ, ಬೆಳದಿಂಗಳ ನಗೆ ಮಾಸದಂತೆ....ಇನ್ನೂ ಇನ್ನೂ ಏನೇನೋ ಹೇಳುವಾಸೆ,ಅದರಂತೆ ಜೀವನದುದ್ದಕ್ಕೂ ನಿನ್ನ ಜೋಪಾನವಾಗಿ ನೋಡಿಕೊಳ್ಳುವ, ಹೆಜ್ಜೆಹಾಕುವ ಆಸೆ. ಆದರೆ, ಕನಸು ದಟ್ಟವಾಗುವಮುನ್ನ... ದಟ್ಟವಾದದ್ದು ಕರಗಿಹೋಗುವ ಮುನ್ನ ಯೋಚಿಸಬೇಕಲ್ಲವೇ....
ಗೆಳತಿ, ನಾನಿಷ್ಟು ಹೇಳಬಲ್ಲೆ, 
         'ಹಿಂದೆ ಜನ್ಮಾಂತರದ ಸಂಜೆಗೆಂಪಿನ ಕೆಳೆಯಲಿ
          ಮೊಳೆತ ಪ್ರೇಮದಮುಗುಳೆ ಈ ಹುಟ್ಟಿನೆಳಹಗಲಿನಲಿ 
          ಮೊದಲನೋಟದ ಭಾನುಕರನ ಸೋಂಕಿಗೆ ಬಿರಿಯಿತು.
          ಹೃದಯ ಪವಾಡವಿದು ಬರಿದೆ ಘಟಿಸುವುದೆಂತು'........
..            ನಿನಗೆ ನನ್ನ  ಹೃದಯದ ಒಳಮಿಡಿತ ಈ ಪದಗಳಲ್ಲಿ ಕಂಡಿರಬಹುದು. 'ನೀನು ನನ್ನ ಕಣ್ಣಿಗೆ ಬಿದ್ದಿದ್ದೇಕೆ...'ಅದು ಜನ್ಮಾಂತರದ ಬಂಧವಿದ್ದೀತು ಎನ್ನುವ ನನ್ನ ಮಾತನ್ನು ಒಪ್ಪುತ್ತೀಯಾ....? ಹಿಂದೆ ಏನಾಗಿದ್ದೆನೋ ಈಗ ಅದು ಕಳೆದಮಾತು. ಮುಂದಿನಬದುಕು ನಿನ್ನೊಂದಿಗೆ....ಇದು ನನ್ನ ಕನಸು, ಅದಮ್ಯ ತುಡಿತ, ಬಾಳಿನ ಸೆಲೆ. ನಿನ್ನಿಂದ, 'ನಾನೂ ನಿನ್ನಂತೆ' ಎನ್ನುವ ಉತ್ತರ ಬಂದೀತಾ...ಬಂದರೆ, ನಾನು ಆಗಸದಲ್ಲಿ ತೇಲಾಡುವ ಮುಗಿಲು, ಬಾರದಿದ್ದರೆ....? ಹಾಗಾಗಬಾರದು. ಭಗ್ನಹೃದಯ ಇದ್ದೂ ಸತ್ತಂತೆ...ಗೆಳತಿ, ನೋವಾಗಿದ್ದರೆ ಕ್ಷಮಿಸು, ಒಂದುಬಾರಿ...ಒಂದುಬಾರಿ ಆಳವಾಗಿ ಈ ಬಗ್ಗೆ ಚಿಂತಿಸು. ನೀನು ಈ ಹೃದಯದೊಳಗೆ ಒಮ್ಮೆ ಕಾಲಿಟ್ಟು ನೋಡು, ಈ ಅರಮನೆಗೆ ರಾಣಿಯಾಗುತ್ತೀಯೆ. ಇದೊಂದು ತಿಂಗಳಲ್ಲೇ ನಾನೆಷ್ಟು ಕನಸಿನ ನವಿರುಬಲೆ ಹೆಣೆದಿಟ್ಟಿದ್ದೀನಿ. ಅದನ್ನು ಕಾಣಲಾದರೂ ಒಮ್ಮೆ ಬಾ ಒಳಗೆ.....     

ನನ್ನ ಮುದ್ದಿನರಗಿಣಿ,  ನನ್ನೊಲವೆ,  ನನ್ನ  ಪ್ರಣಯಸಖಿಯೆ  ಓಹ್..!  ನಾನೀಗ  ಎಷ್ಟು  ರೀತಿಯಲ್ಲಿ  ನಿನ್ನ ಕರೆದರೂ ಬರಡುಪದಗಳೆನಿಸುತ್ತಿದೆ.  ಆದರೆ,  ಹಾಗೆ ಕರೆವ  ಹಕ್ಕೂ  ನನ್ನದಾಗಿದೆ ಅಲ್ಲವೇ....ನಿನ್ನ ಎರಡೇ ಪದಗಳ ಆ ಮೇಘಸಂದೇಶ ಬಂದಾಗ, ನಾನು ನಾನಾಗಿರಲೇ  ಇಲ್ಲ  ಗೆಳತಿ.   ಪಂಚಮವೇದದ  ತುತ್ತತುದಿಯಲ್ಲಿ  ನಾನೊಬ್ಬನೇ....ನನ್ನ ತೋಳ್ತೆಕ್ಕೆಯಲ್ಲಿ ಹಗುರಹೂವಿನ  ಹಡಗು...ನೀನೊಬ್ಬಳೇ...ನನ್ನ ಆ  ದಿನದ  ಶಿವನ  ಮುಂದಿನ  ಪ್ರಾರ್ಥನೆ  ಸುಳ್ಳಾಗಲಿಲ್ಲ. ಈಗಾಗಲೇ ನಮ್ಮೊಲವಿನ  ಪ್ರಣಯಾಂಕುರವಾಗಿ   ಎರಡು  ವರ್ಷಗಳೇ  ಕಳೆದಿವೆ. ಒಂದಾಗುವ  ದಿನ  ದೂರವೇನಿಲ್ಲ. ಎಲ್ಲಕ್ಕೂ ಕಾಲ ಪಕ್ವವಾಗಬೇಕು  ತಾನೇ...ಇದೂ  ಒಳ್ಳೆಯದೇ. ಈಗ  ನೋಡು  ನಮ್ಮೊಳಗಿನ ಈ  ಮೇಘಸಂದೇಶಗಳು  ಹೊಸತೊಂದು ಪ್ರೇಮಲೋಕವನ್ನೇ  ಸೃಷ್ಟಿಸಿಬಿಟ್ಟಿದೆ.  ಪ್ರತಿಯೊಬ್ಬ  ಪ್ರೇಮಿಯ  ಬದುಕಿನಲ್ಲಿ  ಇದೊಂದು  ಸುಂದರಕಾವ್ಯ. ಸಪ್ತಪದಿ ಈ ಕಾವ್ಯದ ಗುರಿ.  ಅದು  ನಮ್ಮ ಪ್ರೇಮವನ್ನು  ಗಟ್ಟಿಗೊಳಿಸುತ್ತಲೇ  ಹೋಗುವ  ಸುಮಧುರಪಯಣ. ಅದಕ್ಕೇ ಈ ಕಾವ್ಯದ ಪ್ರತಿ ಅಕ್ಷರವನ್ನೂ  ಜೇನಿನಂತೆ  ಸವಿದುಬಿಡೋಣ,  ಏನಂತೀ...? ನಿನ್ನ ನನ್ನ ನಡುವಣ ಈ  ಪ್ರೇಮಪತ್ರದ  ಹಾದಿ ಎಷ್ಟು ಚಂದ ಅಲ್ವಾ...ಪತ್ರಕ್ಕೆ  ಕಾಯುವ ಕ್ಷಣ,  ಘಳಿಗೆಗಳು, ಆ  ಕಾತರ, ಆಹಾ...ಈಗ ಆ  ಅಂಚೆಯವ  ಅದೆಷ್ಟು  ಆತ್ಮೀಯನಾಗಿ ಕಾಣುತ್ತಿದ್ದಾನೆ.
         ಆದಿನ, ನಾನು ಸಾವಿರ ಸಾವಿರ ನಿರೀಕ್ಷೆ ಕಟ್ಟಿಕೊಂಡು ಬಂದಿದ್ದ ಆದಿನ...ನನ್ನ ಮನೆಗೇ ನೀ ಬಂದಿದ್ದೆ. ಎದುರಿಗೇ ಇದ್ದೆ. ಎಲ್ಲರ ಕಣ್ತಪ್ಪಿಸಿ ನಿನ್ನನ್ನು ಮತ್ತೆಮತ್ತೆ ನೋಡುವ, ನೋಟದಿಂದಲೇ ಕರಗಿಸಿ ಎದೆಯಲ್ಲಿ ಹುದುಗಿಸಿಕೊಳ್ಳುವ ಆ ಹರಸಾಹಸ.....ನಿನ್ನ ಪಾಡೂ ಇದೇ ಆಗಿತ್ತು ನಾ ಬಲ್ಲೆ ಹುಡುಗಿ. ನೂರು ಜನರ ಮಧ್ಯೆ ನನ್ನ ಬಳಿಯಲ್ಲಿ ನೀ ಹಾದುಹೋಗುವಾಗೊಮ್ಮೆ, 'ನಾನೂ ನಿನ್ನಂತೆ'....ಪಿಸುಗಿದ ಆ ನಿನ್ನ ಜೇನ್ದನಿ....ಅಬ್ಬಾ..! ಹುಚ್ಚಾಗಿ ಬಿರಿದೇ ಹೋಯ್ತೇನೋ ಎನ್ನುವಂತಾದ ಎದೆ, ಮನಸ್ಸನ್ನು ನಾ ಸಂಭಾಳಿಸಿದ ಪರಿ .. ನಿಜ ಹೇಳಲಾ...ಹಾಗೇ ನಿನ್ನ ತಬ್ಬಿಬಿಡಬೇಕೆನ್ನಿಸುವಂತೆ ನನ್ನ ಕೈಗಳು ಅನಾಯಾಸವಾಗಿ ಮುಂಚಾಚಿತ್ತು, ಆದರೆ, ಬಿಡು ...ನೀ ಬಲು ಜಾಣೆಯೇ ಸರಿ, ಎಲ್ಲೋ ಮಾಯವಾಗಿಬಿಟ್ಟೆ. ಹಾಗಾಗದಿದ್ದರೆ, ಆದಿನವೇ ಜಗಜ್ಜಾಹೀರಾಗುತ್ತಿತ್ತ್ತು ಅಲ್ಲವಾ...
                 ಅಂತೂ ಒಲವಿಗೆ ಒಲವಿನ ಮುದ್ರೆ ಬಿದ್ದೇಬಿಟ್ಟಿತು.........
ಅದೊಂದುದಿನ  ನೀನು ಆ  ಸಾಗರದಡದಲ್ಲಿ,  ಸಾಗರಿಕೆಯಾಗಿ  ಕಾಣಿಸಿಕೊಂಡ  ದಿನ...ಎಂಥ  ಅನಿರೀಕ್ಷಿತ, ಆನಂದಮಯ  ಭೇಟಿ  ಅದಾಗಿತ್ತು. ಇಳಿಯುವ  ಸೂರ್ಯನಿಗೆದುರಾಗಿ ಆ  ಮರಳದಿನ್ನೆಯ  ಮೇಲೆ  ಕುಳಿತಿದ್ದೆ ನೀನು ಮತ್ಸ್ಯಕನ್ಯೆಯ  ಹಾಗೆ.  ಎದೆಯ ಮೇಲೆ  ಮಲಗಿದ್ದ ಆ  ಹಾವಿನಂಥ  ಕಪ್ಪುಜಡೆ, ಕೆಳಗಿಳಿದಿದ್ದ  ಅರ್ಧನಿಮೀಲಿತ ನೇತ್ರ, ಹಣೆ-ಮೂಗಿನ ತುದಿಯ  ನವಿರಾದ  ಬೆವರು, ಮರಳಲ್ಲಾಡುತ್ತಿದ್ದ  ಚಿಗುರುಬೆರಳು, ಗಾಳಿಗೆ  ಹಾರಾಡುತ್ತಿದ್ದ ಮುಂಗುರುಳು, ಉಟ್ಟಿದ್ದ ಗುಲಾಬಿಬಣ್ಣದ ಸೀರೆ....ಓಹ್! ನೀನು ಚೆಂಗುಲಾಬಿಯಷ್ಟೇ  ರೂಪಿಣಿಯಾಗಿ  ನನ್ನ ಹಾಗೇ  ಸೆಳೆದುಬಿಟ್ಟಿದ್ದೆ. 'ಕಡಲು ನದಿಯ ಸೆಳೆವುದು' ಎನ್ನುವುದು  ಜಗದ  ಸತ್ಯ, 'ಕಡಲು ಪುರುಷ-ನದಿ ಹೆಣ್ಣು' ಎನ್ನುವುದೂ  ಜಗವೇ  ಒಪ್ಪಿಕೊಂಡ  ಇನ್ನೊಂದು  ಸತ್ಯ. ಆದರಿಲ್ಲಿ ನದಿಯಾದ  ನೀನು  ಕಡಲಾದ  ನನ್ನನ್ನೇ  ಸೆಳೆದುಬಿಟ್ಟಿದ್ದೆ.  ಅದೂ,  ಈ  ಸೆಳೆತ  ಅಂತಿಂಥ  ಸೆಳೆತವಲ್ಲ,  ಮತ್ತೆಂದೂ ಬೇರಾಗದಂಥ,  ಎರಡು  ಒಂದೇಆಗಿ  ಎರಡು  ಇನ್ನಿಲ್ಲವಾದಂಥ  ಸೆಳೆತ.  ನಾನು  ಹತ್ತಿರ  ಬಂದೆ,  ನಿನ್ನ  ಮುಖದ  ತುಂಬಾ ಸಂಜೆಯ ಮೋಹನರಾಗದ ಕೆಂಪು....ಉಕ್ಕಿಬಂದ  ಉನ್ಮಾದದಲ್ಲಿ  ನಿನ್ನ  ಹೆಸರ್ಹಿಡಿದು  ಕರೆದೆ.  ಬೆಚ್ಚಿ  ಬೆವರಿಬಿಟ್ಟೆ  ನೀನು. ಮುಂದೆ.....ಏನಾಯಿತೇ ಹುಡುಗಿ.....ನಿನ್ನ  ನಾ  ನೋಡುತ್ತ-ನನ್ನ ನೀ  ನೋಡುತ್ತ  ಗಂಟೆಗಳು  ಉರುಳಿದವು,  ಕಣ್ಣು ಕಣ್ಣುಗಳು ಅದೆಷ್ಟು  ಮಾತಾಡಿದವು,  'ಮನಸು ಮನಸು'ಗಳು  ಪರಸ್ಪರ  ದೇಹಗಳ  ಬದಲಾಯಿಸಿಕೊಂಡವು.  ನಮ್ಮಿಬ್ಬರನ್ನುಳಿದ ಬೇರೆಲ್ಲವನ್ನೂ   ಪವಿತ್ರ ಪ್ರೇಮ  ಮಾಯವಾಗಿಸಿಬಿಟ್ಟಿತು. ನಿಜ ಗೆಳತಿ,  ಹರಯದ ಗುಂಗಿಗೆ  ಅದೇ ಸಾಟಿ. ಆ ಲೋಕದ ರಂಗಿಗೆ  ಅದೇ ಸಾಟಿ. ಅಲ್ಲಿ ಮೂಡುವ  ಕಾಮನಬಿಲ್ಲಿಗೆ ಆ  ಮದನರತಿ ಮಾತ್ರ  ಸಾಟಿ. ಮಿಕ್ಕೆಲ್ಲ  ಮಿಥ್ಯವೆನ್ನಿಸಿಬಿಡುವ  ಸತ್ಯ. ಆದರೆ,  ಸಮಾಜ,  ರೀತಿರಿವಾಜು,  ಸಂಸ್ಕಾರ ಈ  ಏಣಿ  ತಳ್ಳುವುದು  ಸರಿಯಲ್ಲ  ಎನ್ನುವ  ನಮ್ಮಿಬ್ಬರ  ಎಚ್ಚರಿಕೆ, ಪ್ರೀತಿಯ ಅಮಲಿನ  ಮಧ್ಯೆ  ಇಟ್ಟ  ತಡೆಗೋಡೆಯಂತಿತ್ತು,  ನಾವು  ದಾಟಲಿಲ್ಲ,  ದಾಟಲಿಲ್ಲವೆಂಬ  ಬೇಸರವೂ  ಇಲ್ಲ.  ಇದು ಅಗತ್ಯ   ಅಲ್ಲವೇ....? ಹಿರಿಯರ  ಒಪ್ಪಿಗೆಯ  ಭದ್ರಬುನಾದಿಯ  ಮೇಲೆ    ಪ್ರೇಮಸೌಧ  ಗಟ್ಟಿಯಾಗುವುದೇ ಒಳ್ಳೆಯದು.....
           ಆ...ಮತ್ತೊಂದು ದಿನ... ಹಿರಿಯರ  ಒಪ್ಪಿಗೆ  ಬೀಳುವುದೇ  ಎಂಬ  ಕಾತರದ  ದಿನಗಳಲ್ಲಿ,  ಎಲ್ಲಿ  ಕನಸು  ಭಗ್ನವಾದೀತೋ  ಎಂಬ  ತಳಮಳದಲ್ಲಿ,  ಆ  ಶಿವಾಲಯದ  ಹಿಂದಿನ  ಅಶ್ವತ್ಥವೃಕ್ಷದಡಿಯಲ್ಲಿ  ನಾನು  ಕಾದಿದ್ದೆ  ನನ್ನೊಲವಿನ ನಿರೀಕ್ಷೆಯಲ್ಲಿ.  ಬಂದಳು  ರಾಧೆ,  ಕೈಯ್ಯಲ್ಲಿತ್ತು  ನನಗಾಗಿ  ತಂದ  ಒಲವಿನ  ಕಾಣಿಕೆ.  ಕಣ್ಣತುಂಬ  ತೆಳ್ಳನೆ  ನೀರಪಸೆ, ಯಾವ ದುಗುಡ  ಹೊತ್ತಿತ್ತೋ ಆ  ಪುಟ್ಟಹೃದಯದ  ತುಂಬಾ... ನಡುಗುವ  ಕೈಯ್ಯಿಂದ ಆ  ವಸ್ತುಗಳ  ನನ್ನ  ಕೈಗಿತ್ತಳು. ಜನ್ಮಜನ್ಮಕ್ಕಾಗುವಷ್ಟು  ಪ್ರೀತಿ  ತುಳುಕಿಸುವ  ನೋಟವೆಸೆದಳು.  ನನ್ನನ್ನು  ತನ್ನೆದೆತುಂಬಾ  ತುಂಬಿಕೊಂಡು,  ತನ್ನ ಅಮಲ, ಅಸೀಮ ಚೆಲುವು- ಪ್ರೀತಿಯ  ನೋಟವನ್ನು  ನನ್ನೊಳಗೆ  ತುಂಬಿಸಿ  ಮಾಯವಾಗೇಬಿಟ್ಟಳು  ಸಂಜೆಯಸೂರ್ಯನಂತೆ......                          
                   'ಕೊಳಲನೂದುವ ಕೃಷ್ಣ'....'ನೋಡಿದೆ,  ನನ್ನೊಳಗೇ  ನುಡಿದೆ, 'ಮರುಗಬೇಡವೇ  ಗೆಳತಿ,  ಈ ಕೃಷ್ಣ-ಈ ಕೊಳಲು-ಈ ಗಾನ ಇದು ನಿನಗಾಗಿ ಮಾತ್ರ. ಈ ಜನ್ಮವೇನು, ಮುಂದಕ್ಕೂ ಕೂಡ'..ಈ ಹೃದಯದ ಪ್ರೀತಿ ತುಂಬಿದ ಮೂಕಮರ್ಮರ ಅವಳಿಗಲ್ಲದೆ ಬೇರಾರಿಗೆ ಕೇಳಿಸೀತು..? ಒಮ್ಮೆ ಹಿಂತಿರುಗಿದ್ದೆ ನೀನು ಕೇಳಿಸಿತೋ ಎನ್ನುವಂತೆ. ಕೃಷ್ಣನನ್ನು ನಾ ಎದೆಗೊತ್ತಿಕೊಂಡೆ ಅದು ನೀನೇ ಎಂಬಂತೆ.  ಕಣ್ಣಂಚಿನಲ್ಲಿ ವಿರಹದ, ಪ್ರೇಮ ಭಗ್ನವಾದರೆ...ಎಂಬ ನೋವಿತ್ತೇನೋ....                ಬೆರಳತುದಿಯಲ್ಲಿ ಆ ಪಸೆಯ ಒತ್ತಿ ತಟ್ಟನೆ ಹಾರಿಸಿದೆ ನೀನು.   ಮರುಕ್ಷಣವೇ  ನಿನ್ನ ಪೌರ್ಣಮಿಯಮೊಗದ ತುಂಬಾ ಅರಳಿದ ಆ ಮಂದಹಾಸ ಎಂದೂ ಮರೆಯದ್ದು......
ನೀನೇನೇ ಹೇಳು, ಈ ಮೊಬೈಲ್ಲು, ಟೆಕ್ಸ್ಟ್ ಮೆಸೇಜು, ಈ-ಮೇಲು, ಫೇಸ್ ಬುಕ್ಕು ಇವುಗಳ ಆಕಾಶಮಾರ್ಗದ ಕಣ್ಣು, ಕಿವಿ, ಮುಖಗಳ ಅಗೋಚರ ಸಂಪರ್ಕದ ಲವ್ವಿಗಿಂತ ನಾವು ಅನುಭವಿಸಿದ ಆ ಹರಯದ  ಬಿಸಿಬಿಸಿಪ್ರೇಮ-ಪ್ರಣಯ, ಕದ್ದುಮುಚ್ಚಿ  ನಡೆಸಿದ  ಭೇಟಿಯಲ್ಲೂ 'ಟಚ್ ಮಿ ನಾಟ್' ' ಎಂಬ  ಲಕ್ಷ್ಮಣರೇಖೆ  ನಿಜಕ್ಕೂ  ಅದೆಂತ  ಸೊಗಸಿನದ್ದು  ಅಲ್ಲವೇ...? ನಿನ್ನ  ಬೆರಳಅಂಚಿನಲ್ಲಿ   ಕಲೆತುನಿಂತ  ಆ   ಪ್ರೇಮವಾಹಿನಿಯ   ಸಂಚಲನ   ಪ್ರೇಮಪತ್ರಗಳಲ್ಲಿ   ಹರಿದು   ನನ್ನೆದೆಯ ತೋಯಿಸಿಬಿಡುತ್ತಿದ್ದ  ಆ  ಸಂವಹನ  ಕ್ರಿಯೆ,  ಆ  ಪತ್ರಗಳ  ತಂದಿತ್ತು  ತುಂಟನೋಟವೆಸೆಯುತ್ತಿದ್ದ ಆ  ಅಂಚೆಯವ.....ಓಹ್! ಆ ಭಾಗ್ಯ ಇಂದೆಲ್ಲಿ...?  ಓದಿಓದಿ ಹಳತಾಗಿ,  ಹಳದಿಬಣ್ಣಕ್ಕೆ   ತಿರುಗಿದ ಈ  ಪತ್ರಗಳ  ನಿನ್ನೆದುರು  ಒಮ್ಮೆ  ಬಿಡಿಸಿಟ್ಟುಬಿಟ್ಟರೆ ಸಾಕು,  ನಿನ್ನಲ್ಲಿ  ಮತ್ತದೇ  ಸಂಜೆಯ  ರಾಗರಂಗು.....ಒಮ್ಮೆ  ತುಟಿಯುಬ್ಬಿಸಿ,  ಕೊರಳಕೊಂಕಿಸಿ,  'ಬಿಡಿ,  ನಿಮ್ಗೆ ಮಾಡಕ್ಕೆ ಬೇರೆ ಕೆಲ್ಸ ಇಲ್ಲ'  ಎನ್ನುತ್ತ ನೀ  ನುಣುಚಿಕೊಳ್ಳುತ್ತೀಯ.  ಆದರೆ,  ನಿನ್ನ ಕಣ್ಣೊಳಗು  ಅದೇ '1942 ಎ ಲವ್ ಸ್ಟೋರಿ' ಯ ಮಥನ  ಮಾಡುತ್ತಿದೆಯೆನ್ನುವುದನ್ನು  ನಿನ್ನಿಂದ  ಮುಚ್ಚಿಡಲು  ಸಾಧ್ಯವೇ ಇಲ್ಲ  ಬಿಡು....ಹಿರಿಯರ ಒಪ್ಪಿಗೆಮುದ್ರೆ ಬಿದ್ದು .'ಹಸಿಹಸಿಯಾದ  ಹರಯ-ಗುರಿಕಂಡ ಸಪ್ತಪದಿ'  ಇದಲ್ಲವೇನೆ  ಸಾರ್ಥಕಬಾಳು......
'ಎನ್ನ ರನ್ನೆ ಎನ್ನನೊಲಿದು
ಎನ್ನ ಬಾಳಬೆಳಕು ಎನಿಸಿ
ಕಣ್ಣಮುಂದೆ ಮಿಂಚಿಮೆರೆದು ಸೆಳೆದಳೆನ್ನನು
ಎನ್ನ ಮಬ್ಬುಎದೆಗೆ ಒಲವ ಬೆಳಕ ಕರೆದಳು.'

                                                                         * * * *

                                                                             ವ್ಯಾಲೆಂಟೀನ್ಸ್ ಡೇ  ಗೆ  ಪತ್ರಿಕೆಗೆ  ಬರೆದ ಲೇಖನ