ಗುರುವಾರ, ಮೇ 10, 2018

                                           ಬೇಲಿ ಹೂ....                               ಕವಿತೆ     
                             


ಹೀಗೆ  ಕಾಡದಿರು ಗೆಳೆಯ
ಇರುಳು ಹಗಲುಗಳು  ಬೆಂಬತ್ತಿದಾ ಹಾಗೆ,
ಕರಗಿಬಿಡುವೆನು ಇದ್ದ ನೆಲದೊಳಗೆ ಕರ್ಪೂರದಂತೆ
ಇಷ್ಟಿಷ್ಟೆ ಉರಿದುರಿದು ಇನ್ನಿಲ್ಲದಂತೆ...
ಬೇಲಿಹೂ ಹೊಸತಲ್ಲ, ಹಸಿಯಲ್ಲ
ಮುಂಬೆಳಗ ರಂಗಿನಲಿ ಮಿಂದಿದ್ದು ಹಳತಾಗಿ
ನಡುಮಧ್ಯಾಹ್ನದುರಿಬಿಸಿಲು, ಚಳಿಗಾಳಿಮಳೆಗಳಿಗೆ ಎದೆಯೊಡ್ಡಿ
ಅಷ್ಟಿಷ್ಟು ಬೆದರಿ, ಮುರುಟಿ, ಕಾಲನೊರಟುತನಕ್ಕೆ ಮಣಿಯುತ್ತ
ಬೇಲಿಗಂಟಿಯೇ ನಗುತಿಹುದು
ಬೇಲಿಚೌಕಟ್ಟು, ನೆಲನಿಯಮ ನೆಚ್ಚುತ್ತ
ಹಬ್ಬಿದಾ ಬಳ್ಳಿ ಋಣಶೇಷ ನೆನೆಯುತ್ತ...
ಹೊರಗಿಣುಕಿ ಧೂಳಾಗಲಿಚ್ಛಿಸದೀ
ಅಹಲ್ಯೆಯನು, ನಿಷ್ಠೆ, ಶಪಥದಿಂದೆಳೆತಂದ
ಸ್ವರ್ಗಾಧಿಪತಿಯಂತೆ ನವಿರುಪರದೆಯ ಹಿಂದೆ
ಕೆಣಕಿದರು ಗೆಳೆಯ....
ಚಿತ್ತತೋಟದಲಷ್ಟು ಅಡ್ಡಾಡಿ, ಕನಸಚಿಟ್ಟೆಗಳ ಹರಿಬಿಟ್ಟು
ಎದೆಗೊಳವ ರಾಡಿಗೊಳಿಸದಿರು ಗೆಳೆಯ...
ಕಣ್ಣೆದುರು ಹಾಯದಿರು ಮುಂಜಾನೆ
ಕೃಷ್ಣನಾ ಕೊಳಲ್ಹಿಡಿದು,
ಮತ್ತೆ ಕಾಡದಿರು ಇರುಳಹಾಸಲಿ ಸವಿಗನಸ ನಕ್ಷತ್ರಗಳರಳಿಸುವ
ಹುಚ್ಚುಪ್ರೇಮಿಯ ಕುಂಚವಿಡಿದು...
ಪಡುವಣದ ಸಂಜೆಯನು ಸವಿಯಬೇಕಿದೆಯಿನ್ನೂ 
ಕೆಣಕಿ ಮೈಮರೆಸದಿರು ಗೆಳೆಯಾ,
ಇದ್ದಲ್ಲೆ ಇರಲುಬಿಡು ಇದ್ದಂತೆ, ಒಂದಿಷ್ಟೂ ಸದ್ದಾಗದಂತೆ
ನೆಲನಿಯಮ ಮುರಿಯದಂತೆ,
ನಿಷ್ಠೆ ಸೋರಿ
ಬಿಟ್ಟಿ ಕತೆಯಾಗದಂತೆ,
ಅವರಿವರ ಕೆಂಗಣ್ಣು, ಅಪಹಾಸದಾ ಕಾಲ್ಧೂಳಿನಲಿ
ಅವಧಿಗೂ ಮುನ್ನ
ನೆಲ ಕಚ್ಚದಂತೆ.....
* * *
ಎಸ್.ಪಿ.ವಿಜಯಲಕ್ಷ್ಮಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ