ಗುರುವಾರ, ಮೇ 10, 2018


                       ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು....                                                                                                                  5.11.2018


                                                             ಅಜಂತ- ಎಲ್ಲೋರ 


      ಸಾಂಸ್ಕøತಿಕ ಪರಂಪರೆಯ ಭದ್ರ ನೆಲೆಗಟ್ಟಿನಲ್ಲಿ ನಿಂತಿರುವ ಭಾರತ ನಮಗೆ ಹೆಮ್ಮೆಯ ಜನ್ಮಭೂಮಿಯಾದರೆ, ಹೊರಗಿನವರಿಗೆ ಅದ್ಭುತ, ವಿಸ್ಮಯ, ಶಿಲ್ಪಕಲೆ, ತತ್ವಾದರ್ಶಗಳ ಅಚ್ಚರಿನೆಲ.. ಹೌದು, ಇಲ್ಲಿ ಸೂರೆಯಾಗಿರುವ ಕಲೆ, ಪರಂಪರಾಗತ ಮೌಲ್ಯ, ಸೌಂದರ್ಯ, ತತ್ವಾದರ್ಶಗಳನ್ನರಸಿ ಕಾಣುವ ಹಪಹಪಿಯಲ್ಲಿ ಬರುವ ವಿದೇಶೀಯರದೆಷ್ಟೋ..!!! ಕುವೆಂಪು ಅವರು ಉದ್ಗರಿಸಿದ, 'ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು...' ಎನ್ನುವ ಮಾತಿಗೆ ಸಾಕ್ಷ್ಯವೆಂಬಂತೆ ದೇಶದ ಉದ್ದಗಲಕ್ಕೆ ಹರಡಿರುವ ಭವ್ಯಕುಸುರಿ ಕೆಲಸದ ದೇಗುಲ, ಅರಮನೆ, ಗುಹಾಲಯಗಳ ಕಂಡು ಬೆರಗಾಗಿ ನಿಲ್ಲುತ್ತಾರೆ ಹೊರಗಿನವರು; ನಾವು, ನಮ್ಮದೆಂಬ ಹೆಮ್ಮೆ-ತಾದಾತ್ಮ್ಯದಲ್ಲಿ ಧನ್ಯಭಾವವನ್ನು ಅನುಭವಿಸುತ್ತೇವೆ. ಬೇಲೂರು, ಹಳೇಬೀಡು, ಗೊಮ್ಮಟ ಹೇಳಹೊರಟರೆ ಪಟ್ಟಿ ಬೆಳೆಯುತ್ತದೆ, ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಉದ್ದಗಲದಲ್ಲಿ....!!! ಹಾಗೆ ಕಂಡು ಬೆರಗಾಗಿ, ಮೂಕವಾಗಿ ನಿಲ್ಲುವ ಅದ್ಭುತಗಳ ಪಟ್ಟಿಯಲ್ಲಿ ನಾನೀಗ ಕಂಡುಬಂದಿರುವ ಅಜಂತ-ಎಲ್ಲೋರ ಗುಹಾಂತರ್ಗತ ದೇವಾಲಯಸಂಕೀರ್ಣಗಳು ತಲೆಯೆತ್ತಿ ನಿಂತಿವೆ..! ನಾಗರೀಕಜಗತ್ತಿನಿಂದ ದೂರವಾಗಿ, ಮೌನಕಣಿವೆಯ ಎದೆಯಲ್ಲಿ ಮೌನಹಾಡಾಗಿ ಪಿಸುಗುತ್ತ ಮರೆಯಲ್ಲಿದ್ದ ಈ ಗುಹಾದೇಗುಲಗಳು ಅತ್ಯಂತ ಪ್ರಾಚೀನದವು. ನಿರ್ಮಾಣವಾದದ್ದೇ ಮೊದಲು ಬೌದ್ಧರಿಂದ. ಜಗದ ಗದ್ದಲಗಳಿಂದ ದೂರಾಗಿ ಸತ್ಯಾನ್ವೇಷಣೆಯನ್ನರಸಿ, ಪ್ರಕೃತಿಯ ಆಶ್ರಯಕ್ಕೆ ಬಂದವರಿವರು. ಮಹಾರಾಷ್ಟ್ರದ ವಗೋರನದಿ ಕಣಿವೆಯ ಬೆಟ್ಟದೆದೆಯಲ್ಲಿ ಇಂತಹ ಶಾಂತಪರಿಸರ ಕಂಡು, ಅಜಂತಾಗುಹಾಲಯಗಳ ಅದ್ಭುತಲೋಕಕ್ಕೆ ಮುನ್ನುಡಿ ಬರೆದರೆ, ಅತ್ತ ನೂರುಕಿ.ಮೀ ಅಂತರದ ಎಲ್ಲೋರದಲ್ಲಿ ಮುಂದಿನ ಕಾಲದಲ್ಲಿ ಇಷ್ಟೇ ಅದ್ಭುತವಾಗಿ ನಿರ್ಮಾಣವಾದದ್ದು ಇನ್ನೊಂದು ವಿಶಿಷ್ಠ ಕಲಾಪ್ರಪಂಚ. ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದೆ, ವೈಜ್ಞಾನಿಕ ಅಂಕಿಅಂಶಗಳ ಸಿದ್ಧಭೂತ ಥಿಯರಿಗಳಿಲ್ಲದೆ, ವಿದ್ಯುಚ್ಛಕ್ತಿಯ ಸಹಾಯವಿಲ್ಲದ ಕಗ್ಗತ್ತಲಗುಹೆಗಳಲ್ಲಿ ಇಷ್ಟೊಂದು ಪರಿಪೂರ್ಣತೆಯ ಕರಾರುವಾಕ್ಕು ಗಣಿತಜ್ಞಾನಾಧಾರಿತ ಕೆತ್ತನೆಯನ್ನು ಅಗಾಧ, ಅಪಾರವಾಗಿ ಮಾಡಿದ್ದಾರೆಂದರೆ ನಮ್ಮ ಪ್ರಾಚೀನರ ವಿದ್ವತ್ತು, ಜ್ಞಾನ, ವಿಜ್ಞಾನ, ಕಲಾಕೌಶಲ ಎಷ್ಟಿತ್ತೆಂದು ನಮಗೆ ಅಂದಾಜು ಮಾಡಲೂ ಸಾಧ್ಯವಿಲ್ಲ. ಪ್ರತಿಯೊಂದೂ ಕೈಯ್ಯ ಕೆತ್ತನೆಗಳನ್ನೇ ನಂಬಿ ಮೂಡಿಬಂದವು.. 
               ಇಲ್ಲಿ ಬೌದ್ಧ, ಹಿಂದೂ, ಜೈನಸಂಪ್ರದಾಯದ ಶಿಲಾದೇಗುಲಗಳಿದ್ದು ಅಂದಿನವರ ಸರ್ವಧರ್ಮ ಸಾಮನ್ವಯಿಕ ಸಹಿಷ್ಣುತೆಯ ಸಾಕ್ಷಿಗಳಾಗಿವೆ; ಭಾರತದ ಹೆಗ್ಗಳಿಕೆಯೆನ್ನಿಸಿಕೊಂಡಿವೆ; ಪರದೇಶೀಯರು ಮುಗಿಬಿದ್ದು ಬರುವಂತೆ ಜಗವನ್ನೇ ಸೆಳೆಯುತ್ತಿವೆ.. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಈ ಅಜಂತ-ಎಲ್ಲೋರ ಕುಸುರಿಕೆತ್ತನೆಯ ಗುಹಾಲಯಗಳು ಒಂದರಿಂದ ಇನ್ನೊಂದು ಭಿನ್ನವಾಗಿದ್ದು ತಮ್ಮದೇ ರೀತಿಯಲ್ಲಿ ಅದ್ವಿತೀಯವೆನ್ನಿಸಿವೆ. ಎಲ್ಲೋರ ಅದ್ವಿತೀಯ ಶಿಲ್ಪಕಲಾಕೃತಿಗಳ ಕೆತ್ತನೆಗೆ ಮುಖ್ಯವೆನ್ನಿಸಿದರೆ, ಅಜಂತ ಎಲ್ಲರ ಗಮನ ಸೆಳೆಯುವುದು ತನ್ನ ವರ್ಣಚಿತ್ರಗಳಿಂದ, ನೈಪುಣ್ಯದ ಮನಮೋಹಕ ಬಣ್ಣ ತುಂಬಿರುವ ಉಬ್ಬುಶಿಲ್ಪಗಳಿಂದ.. 
                ಕವಿ ಕುವೆಂಪು ಹೇಳಿರುವ, `ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ' ಎನ್ನುವ ಅರ್ಥಪೂರ್ಣ ಸಾಲುಗಳ ಸೋಹಾದರಣೆಯಂತಿವೆ ಈ ಎರಡೂ ತಾಣಗಳು. ಸಾಮಾನ್ಯರ ದೃಷ್ಟಿಯಿಂದ ಭಿನ್ನವಾಗಿ, ಕಂಡ ಬಂಡೆಗಳಲ್ಲೆಲ್ಲ ಅದ್ಭುತ ಕಲಾಕೃತಿಗಳನ್ನು ಕಲ್ಪಿಸಿಕೊಂಡು, ತಮ್ಮ ತನುಮನಧನವನ್ನು ಅರ್ಪಿಸಿಕೊಂಡು, ಸೂಕ್ಷ್ಮಾತಿಸೂಕ್ಷ್ಮ ಕಲಾಕೃತಿಗಳ ರಚಿಸಿ ಲೋಕಾರ್ಪಣೆ ಮಾಡಿಹೋಗಿರುವ ನಮ್ಮ ಪ್ರಾಚೀನರ ಈ ಶ್ರಮ, ಕೌಶಲ್ಯ, ಪರಂಪರಾಗತ ಮನಸ್ಸುಗಳಿಗೆ ನಾವೇನು ಕೊಡಬಲ್ಲೆವು...? ಬಾಗಿಲಲ್ಲಿ ಕೈಮುಗಿದು ಭಕ್ತಿಯಿಂದ ಒಳಹೊಕ್ಕು ಒಂದೊಂದನ್ನೂ ಕಣ್ಣಲ್ಲಿ ತುಂಬಿಕೊಳ್ಳಬೇಕು, ಅಂತರಂಗಕ್ಕೆ ಇಳಿಸಿಕೊಳ್ಳಬೇಕು, ಮುಂದಕ್ಕೂ ಜತನದಿಂದ ಉಳಿಸಿಕೊಳ್ಳಬೇಕು.. ಅಷ್ಟೆ.... 
                                       ಅಜಂತ.....  
ಬ್ರಿಟೀಷರ ಕಪಿಮುಷ್ಠಿಯಲ್ಲಿ ನರಳಿದ ನಮಗೆ ಅವರಿಂದ ಹಾಗೊಂದು, ಹೀಗೊಂದು ಒಳಿತಾದ ಉದಾಹರಣೆಗಳೂ ಇವೆ. ಅಂತಹುಗಳಲ್ಲಿ ಇದೊಂದು. ಈ ಗುಹೆಗಳು ಚೀನಾ ಬೌದ್ಧಯಾತ್ರಿಕರ ಗ್ರಂಥಗಳಲ್ಲಿ ಉಲ್ಲೇಖವಾಗಿದ್ದು, ಕೇವಲ ಅಷ್ಟಿಷ್ಟು ಸ್ಥಳೀಯರಿಗೆ ಮಾತ್ರ ತಿಳಿದಿದ್ದ್ದು ಹೊರಜಗತ್ತಿಗೆ ನಿಗೂಢವಾಗೇ ಇದ್ದವು. ಬ್ರಿಟಿಷ್ ಅಧಿಕಾರಿ ಜಾನ್‍ಸ್ಮಿತ್ 1819ರಲ್ಲಿ ತನ್ನ ಬೇಟೆಖಯ್ಯಾಲಿಯಲ್ಲಿ ವಗಾರ್ ನದಿಕಣಿವೆಯ ಬಳಿಯ ಈ ದಟ್ಟಕಾಡಿಗೆ ಬಂದಾಗ ದೂರದ ಗುಹೆಯೊಂದು ಗೋಚರವಾಗಿ ಸ್ಥಳೀಯ ಕುರಿಕಾಯುವ ಬಾಲಕನೊಡಗೂಡಿ ಹೋದಾಗ ಕಂಡುಬಂದಿದ್ದು ಒಂದು ತುಣುಕು. ತದನಂತರದಲ್ಲಿ ಸ್ಮಿತ್ ತನ್ನ ಸೇನಾಸಹಾಯದೊಂದಿಗೆ ಉತ್ಖನನ ನಡೆಸಿದಾಗ ಅದ್ಭುತ ಕಲಾಸಂಪತ್ತು ಬೆಳಕಿಗೆ ಬಂದವು. ಇಂದು ಕಣಿವೆ ಮೇಲ್ಭಾಗದ ತುದಿಯಲ್ಲಿ ಇವನ ನೆನಪಿನ ಕುಟೀರವೊಂದನ್ನು ರಚಿಸಲಾಗಿದೆ. ಒಳಗಿನ ಗುಹೆಯ ಕಂಬವೊಂದರ ಮೇಲೆ ಇವನ ಹಸ್ತಾಕ್ಷರ, ಪುಟ್ಟ ಟಿಪ್ಪಣಿಯಿದೆ... ಸಹ್ಯಾದ್ರಿಪಶ್ಚಿಮಘಟ್ಟ ಶ್ರೇಣಿಯ ಅಂಚಲ್ಲಿ ನಿರ್ಮಾಣವಾಗಿರುವ ಈ ಗುಹಾಂತರ್ಗತ ದೇಗುಲಗಳ ಸಂಖ್ಯೆ ಮೂವತ್ತು. ಈ ಬಂಡೆಬೆಟ್ಟಗಳು ರಚನೆಯಾದದ್ದು ಸಾವಿರಾರುವರ್ಷಗಳ ಹಿಂದೆ ಅಗ್ನಿಪರ್ವತಗಳು ಕಕ್ಕಿದ ಲಾವಾದಿಂದ. ಸಮತಲವಾಗಿ, ಪದರುಪದರಲ್ಲಿ ಗಟ್ಟಿಗೊಂಡ ಈ ಶಿಲಾಬೆಟ್ಟಗಳಿಗೆ 'ಬಸಾಲ್ಟ್ ರಾಕ್' ಎನ್ನುತ್ತಾರೆ. ಇವು ಶಿಲ್ಪಕಲಾಕೃತಿಗಳ ರಚನೆಗೆ ಬಹು ಪ್ರಶಸ್ತವಾದ ಬಂಡೆ. ಕ್ರಿ.ಪೂ.2ನೇ ಶತಮಾನದಲ್ಲಿದ್ದ ಈ ಭಾಗದ ಸಾತವಾಹನ ದೊರೆಗಳಿಂದ ಬೌದ್ಧಧರ್ಮಕ್ಕೆ ಸಿಕ್ಕ ಪ್ರೋತ್ಸಾಹ ಇಲ್ಲಿ ಇಂತಹ ಅದ್ಭುತ ನಿರ್ಮಾಣಕ್ಕೆ ಬುನಾದಿಯಾಗಿದೆ. ಸರಿಸುಮಾರು 2200ವರ್ಷಗಳ ಹಿಂದೆ ನಡೆದ ಈ ನಿರ್ಮಾಣಕಾರ್ಯ ನಿರಂತರವಾಗಿ ಒಮ್ಮೆಲೆ ರಚನೆಯಾಗದೆ, ಅವೇ ಯೋಚನೆ, ಯೋಜನೆ, ಮನೋಭಾವ, ದಿಗ್ದರ್ಶನ ಮುಂದಕ್ಕೂ ರವಾನೆಯಾಗುತ್ತ ಆಗಾಗ, ಅಷ್ಟಿಷ್ಟು ಎಂಬಂತೆ ಕ್ರಿ.ಶ.7ನೇ ಶತಮಾನದವರೆಗೂ ನಡೆದಿದೆ. ಕುದುರೆಲಾಳದಾಕಾರದ ಈ ಭಾಗದಲ್ಲಿ ಉದ್ದಕ್ಕೂ ಕಡೆದಿರುವ ಗುಹೆಗಳಲ್ಲಿ ಸ್ತಂಭಗಳು, ಮೂರ್ತಿಗಳು, ಕುಸುರಿಕೆತ್ತನೆಗಳು ಎಲ್ಲಕ್ಕಿಂತ ಹೆಚ್ಚು ಪೈಂಟಿಂಗ್‍ಗಳು ಅಂದಿನವರ ಲೆಕ್ಕಾಚಾರ, ಜ್ಞಾನ, ಪ್ರತಿಭಾಕೌಶಲ್ಯಗಳ ಸಂಪೂರ್ಣ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಇವು ಎರಡುಹಂತಗಳಲ್ಲಿ ನಿರ್ಮಾಣವಾಗಿದ್ದು ಮೊದಲಹಂತ ಕ್ರಿ.ಪೂರ್ವದಲ್ಲಾದರೆ, ಎರಡನೇ ಹಂತ ಕ್ರಿ.ಶ.5ನೇ ಶತಮಾನದಲ್ಲಿ ಸಾತವಾಹನರ ಮುಂದಿನ ಪೀಳಿಗೆಯಾದ ವಕಟಕ ವಂಶದ ದೊರೆಗಳಿಂದ ನಿರ್ಮಾಣವಾಗಿದೆ.                     
ಗುಹೆಗಳ ಲೋಕದಲ್ಲಿ... ಇಲ್ಲಿಯ ಶೇಕಡ 80 ಗುಹೆಗಳು ಬೌದ್ಧವಿಹಾರಗಳು. ಅಂದರೆ, ಬೌದ್ಧಭಿಕ್ಷುಗಳು, ಹೊರಗಿನಿಂದ ಬರುವ ಆಸಕ್ತ ಯಾತ್ರಿಕರು ತಂಗುವ, ಧರ್ಮಶಿಕ್ಷಣ ಪಡೆವ ತಾಣ. ಇಲ್ಲಿ ದೊಡ್ಡದೊಂದು ಹಜಾರ, ಅದಕ್ಕೆ ಹೊಂದಿಕೊಂಡು ಚಿಕ್ಕಚಿಕ್ಕ ಮಲಗುವ ಕಲ್ಲಲ್ಲೇ ಕೊರೆದ ವಿಭಾಗಗಳು, ಮಧ್ಯೆ ಬುದ್ಧನ ಮೂರ್ತಿ ಕೆತ್ತಲಾಗಿದೆ. ಇವುಗಳನ್ನು ಬೌದ್ಧ ಪರಿಭಾಷೆಯಲ್ಲಿ 'ಮೊನಾಸ್ಟರಿ' ಎನ್ನುತ್ತಾರೆ. ಚೌಕಾಕಾರದ ಕಂಬಗಳಿಂದ ಚೌಕಾಕಾರದಲ್ಲಿ ನಿರ್ಮಾಣವಾಗಿರುವ ಈ ವಿಹಾರಗಳಲ್ಲಿ ವರ್ಣಉಬ್ಬುಶಿಲ್ಪಗಳು ಅತ್ಯಂತ ಪ್ರಮುಖ ಸ್ಥಾನ ಪಡೆದಿವೆ. ರಾಜಪರಿವಾರ, ಅರಮನೆದೃಷ್ಯಗಳು, ಸಾಮಾನ್ಯರು, ಪ್ರಾಣಿಗಳು, ದೇವತೆಗಳು, ಆಭರಣಗಳ ಸೂಕ್ಷ್ಮಕೆತ್ತನೆಗಳು ನಿಜಕ್ಕೂ ದಂಗುಬಡಿಸುತ್ತವೆ. ವಿದೇಶೀ ರಾಯಭಾರಿಗಳು ಭಾರತಕ್ಕೆ ಬಂದುಹೋಗಿರುವ ಸಾಕ್ಷ್ಯವಾಗಿ ಆ ದೃಷ್ಯಗಳನ್ನೂ ಕೆತ್ತಲಾಗಿದೆ. ಇವುಗಳಲ್ಲಿ ಬಹುಪಾಲು ಉಬ್ಬುವರ್ಣಶಿಲ್ಪಗಳಾಗಿವೆ. . 1, 2, 4-8, 11-16 ಇವೆಲ್ಲವೂ ವಿಹಾರಗಳೇ. ಬೇರೆಡೆಯಲ್ಲೂ ಅಲ್ಪಸ್ವಲ್ಪ ವರ್ಣಚಿತ್ರಗಳಿದ್ದರೂ, 1ನೇ, 2ನೇ ಮತ್ತು 16ನೇ ಗುಹೆಯಲ್ಲಿ ಪೈಂಟಿಂಗ್‍ಗಳು ಪ್ರಧಾನವಾಗಿ ಗಮನ ಸೆಳೆಯುತ್ತವೆ. ಇಲ್ಲಿ ಬೆಳಕಿಲ್ಲದಿರುವುದರಿಂದ ಟಾರ್ಚಿನ ಬೆಳಕಲ್ಲಿ ವರ್ಣಚಿತ್ರಗಳ ಸೊಬಗನ್ನು ಕಾಣಬೇಕು. ಇಲ್ಲಿ ಹಿಂಭಾಗದ ಗೋಡೆಯ ಮೇಲೆ ಚಿತ್ರಿತವಾಗಿರುವ ಮ್ಯೂರಲ್(ಉಬ್ಬುಶಿಲ್ಪ)ಪೈಂಟಿಗ್‍ಗಳ ಹತ್ತಿರ ಹೋಗಲು ಸಾಧ್ಯವಿಲ್ಲ, ಕಾರಣ, ಹಿಂದೆ ಅವುಗಳನ್ನು ಲಕ್ಷಾಂತರ ಮಂದಿ ಮುಟ್ಟಿ ನೋಡಿದ ಪರಿಣಾಮ ಪೈಂಟಿಂಗ್ ತನ್ನ ಮೂಲಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ, ಅವುಗಳನ್ನು ಮುಂದಿನ ಪೀಳಿಗೆಗೂ ಸ್ಥಳಾಂತರಿಸಬೇಕಾದ ಜವಾಬ್ದಾರಿಯಲ್ಲಿ ಸಂಬಂಧಪಟ್ಟ ಇಲಾಖೆ, ಹಜಾರದಲ್ಲೇ ತಡೆಕಂಬಿಗಳ ಹಾಕಿ, ಇಲ್ಲಿಂದಲೇ ವೀಕ್ಷಿಸುವ ಏರ್ಪಾಡು ಮಾಡಿದೆ. ಇಲ್ಲಿ ಯಾವ ಕೃತಕಬೆಳಕಿಗೂ ಅವಕಾಶವಿಲ್ಲ. 
          9, 10, 19, 26, 29 ಈ ಎಲ್ಲ ಗುಹೆಗಳು ಚೈತ್ಯಗೃಹಗಳು. ಕೆಲವು ಕ್ರಿಸ್ತಪೂರ್ವದ ರಚನೆಗಳು, ಇನ್ನು ಕೆಲವು ಕ್ರಿಸ್ತಶಕದ್ದು. ಚೈತ್ಯಗೃಹವೆಂದರೆ ಪೂಜಾಮಂದಿರ, ಶ್ರೈನ್, ಪ್ರಾರ್ಥನಾಸ್ಥಳ...ಇವು ಆಯತಾಕಾರದಲ್ಲಿದ್ದು ಎತ್ತರದ ಛಾವಣಿ, ಗುಮ್ಮಟಾಕಾರದ ಮೇಲ್ಭಾಗ, ದುಂಡನೆಯ ಕಂಬಗಳನ್ನು ಹೊಂದಿದ್ದು, ಬಹುತೇಕ ಕ್ರಿಶ್ಚಿಯನ್ ಕೆಥಡ್ರೆಲ್‍ಗಳ ವಿನ್ಯಾಸವನ್ನು ಹೋಲುತ್ತವೆ. 'ಇವುಗಳಿಂದ ಪ್ರೇರಿತವಾಗಿ ಕೆಥಡ್ರೆಲ್‍ಗಳ ವಿನ್ಯಾಸವೂ ರೂಪಿತವಾಗಿರಬಹುದು' ಎನ್ನುವ ಗೈಡ್ ಮಾತನ್ನು ನಮಗೆ ಅಲ್ಲಗೆಳೆಯಲಾಗಲಿಲ್ಲ. ಕಾರಣ, ಇವು ಕ್ರಿ.ಪೂ.ದ ರಚನೆಗಳು; ವಿದೇಶೀ ಯಾತ್ರಿಕರು ಇಲ್ಲಿ ಬಂದುಹೋಗಿರುವ ಉಲ್ಲೇಖಗಳು ಚರಿತ್ರೆಯಲ್ಲಿವೆ. ಸಾಧ್ಯತೆ ಇವೆ ಎನ್ನಿಸಿತು. ಇಲ್ಲಿಯೂ ಕಂಬಗಳ ಹಿಂದೆ ಗೋಡೆಗೂ ಕಂಬಗಳಿಗೂ ನಡುವೆ ಓಡಾಡುವ ಸ್ಥಳವಿದ್ದು, ಇದು ಭಗವಾನನಿಗೆ ಪ್ರದಕ್ಷಿಣಾ ನಮಸ್ಕಾರ ಹಾಕಲು ಯೋಜಿಸಲಾಗಿದ್ದರೂ, ಈಗದು ಸಾಧ್ಯವಿಲ್ಲ. ಕಾರಣ, ಇಲ್ಲಿಯೂ ಗೋಡೆಗಳ ಮೇಲಣ ವರ್ಣಚಿತ್ರಗಳನ್ನು ರಕ್ಷಿಸಲೋಸುಗ ತಡೆಕಂಬಿಗಳಿವೆ..... 
                    ಕಂಬಗಳಿಂದ ಭದ್ರಗೊಳಿಸಿದ ಹಜಾರಗಳಿರುವ ಈ ಗುಹಾದೇಗುಲಗಳ ದ್ವಾರದಲ್ಲೇ ಕಂಬಾಧಾರಿತ ಪೋರ್ಟಿಕೋಗಳಿದ್ದು ಕೆಲವೆಡೆ ಇಲ್ಲಿಯೂ ಸೂಕ್ಷ್ಮಕೆತ್ತನೆಗಳ ಧರ್ಮಾಧಾರಿತ ದೇವತೆಗಳ ಶಿಲ್ಪಗಳು, ಅಲಂಕಾರಿಕ ಹೂಬಳ್ಳಿ ಚಿತ್ರಣಗಳು, ಪ್ರಾಣಿಪಕ್ಷಿಗಳ ಕೆತ್ತನೆಗಳು ಕಂಡುಬರುತ್ತವೆ. ಅಜಂತಾದ ವರ್ಣಚಿತ್ರಗಳು.... ಅಜಂತ ಪ್ರಾಮುಖ್ಯವಾಗಿ ವಿಶ್ವದ ಗಮನ ಸೆಳೆಯುವುದು ತನ್ನ ಪೈಂಟಿಂಗ್ ಕಲೆಯಿಂದ. 2000ವರ್ಷಗಳ ಹಿಂದೆ ಹೀಗೊಂದು ಅತ್ಯದ್ಭುತ ಕಲೆ, ವರ್ಣಜ್ಞಾನ ಅವರಲ್ಲಿತ್ತೆನ್ನುವುದು ಇಂದಿಗೆ ಒಂದು ಅಚ್ಚರಿಯ ಸಂಗತಿ. ಪ್ರಾಚೀನಕಾಲದಲ್ಲಿ ಬೌದ್ಧಭಿಕ್ಷುಗಳು ಮಳೆಗಾಲದಲ್ಲಿ ಹೊರಗೆ ಹೋಗಬಾರದೆನ್ನುವ ನಿಯಮವಿತ್ತಂತೆ. ಹಾಗಾಗಿ, ಧರ್ಮಧಾರಿತ ಸಂಗತಿಗಳಲ್ಲಿ ಈ ಗುಹೆಗಳಲ್ಲಿ ಕಾಲಕಳೆಯುತ್ತಿದ್ದ ಮಾಂಕ್‍ಗಳು ಕೆಲವು ನುರಿತ ಕಲಾಕಾರರೊಂದಿಗೆ ಸೇರಿ, ಈ ವರ್ಣಕಲೆಯನ್ನು ರೂಢಿಸಿಕೊಂಡು, ಬಿಡುವಿನಲ್ಲಿ ಈ ಚಿತ್ರಗಳನ್ನು ಬಿಡಿಸಿದ್ದಾರೆನ್ನುತ್ತದೆ ಸಂಶೋಧನೆಗಳು. ಭತ್ತದಹೊಟ್ಟು, ತರಕಾರಿನಾರು, ಹುಲ್ಲು ಇತ್ಯಾದಿಗಳ ಮಿಶ್ರಣವನ್ನು ಕಲ್ಲಿನ ಗೋಡೆಯ ಮೇಲೆ ದಪ್ಪನಾಗಿ ಬಳಿದು, ಅದರ ಮೇಲೆ ಇಟ್ಟಿಗೆಪುಡಿ, ಸುಟ್ಟಶಂಖ, ಮರಳಪುಡಿ, ಕಾಕಂಬಿ, ಬಿಲ್ವದ ತಿರುಳು ಇತ್ಯಾದಿಗಳ ಮಿಶ್ರಣಪಾಕವನ್ನು ಬಳಿದು, ಮೇಲೆ ಬಿಳಿಯ ಪ್ಲಾಸ್ಟರನ್ನು ಹಚ್ಚಿದಾಗ ಉಬ್ಬುಶಿಲ್ಪಗಳಿಗೆ ಕ್ಯಾನ್ವಾಸ್ ಒಂದು ಸಿದ್ಧವಾದಂತೆ. ಇದು ಹಸಿಯಿದ್ದಾಗಲೇ ಚಿತ್ರಗಳ ನಕ್ಷೆ ಬಿಡಿಸಿ, ತೆಳುವಾಗಿ ಬಣ್ಣವನ್ನು ಹಚ್ಚಿ ಬಿಡುತ್ತಿದ್ದರಂತೆ. ಮರದಂಟನ್ನು ಪ್ರಧಾನ ಮೂಲ ಆಕರವಾಗಿಸಿ, ಸಹಜ ಪ್ರಾಕೃತಿಕ ವಸ್ತುಗಳನ್ನು ಹಾಗೂ ಉತ್ತರ, ಏಷಿಯಾ, ಪರ್ಷಿಯಾದಿಂದ ಆಮದಾಗಿಸಿಕೊಂಡ ಕೆಲವು ವಿಶೇಷ ವಸ್ತುಗಳ ಸೇರಿಸಿ ತಯಾರಿಸಿದ ಬಣ್ಣಗಳನ್ನು ಒಣಗಿದ ಉಬ್ಬುಶಿಲ್ಪಗಳ ಮೇಲೆ ನಾಜೂಕಿನಿಂದ ವರ್ಣಲೇಪ ಮಾಡುತ್ತಿದ್ದರಂತೆ. ಇದು ಯೂರೋಪಿನ 'ಫ್ರೆಸ್ಕೊ'ಎಂಬ ವರ್ಣಸಂಯೋಜನೆಯ ಕಲಾಕೌಶಲ್ಯದ ಪ್ರಕಾರವಾಗಿದೆ.. ನಾವು ಚಿಕ್ಕಂದಿನಲ್ಲಿ ಅಜಂತದ ಬಗ್ಗೆ ಚಿಕ್ಕ ಪಾಠವೊಂದನ್ನು ಕಲಿಯುವಾಗ ನೋಡಿದ ಚಿತ್ರವೊಂದು ಎಲ್ಲರ ನೆನಪಿನಲ್ಲಿರಬಹುದು. ಅಜಂತ ಎಂದರೆ ಅದೇ ಚಿತ್ರ ಎಲ್ಲರ ಕಣ್ಮುಂದೆ. ತುಸು ಬಲಕ್ಕೆ ಬಾಗಿ, ಕೈಯ್ಯಲ್ಲಿ ಕಮಲದ ಹೂ ಹಿಡಿದ ಬುದ್ಧಾವತಾರದ 'ಪದ್ಮಪಾಣಿ' ಅಥವಾ ಅವಲೋಕಿತೇಶ್ವರ. ಇದು ಜಾತಕಕತೆಯ ಗೌತಮಬುದ್ಧನ ಹಿಂದಿನ ಜನ್ಮ.. ನಿಜ, ಇಡೀ ವಿಶ್ವದ ಗಮನ ಕೂಡ ಸೆಳೆದಿದೆ ಈ ಪೈಂಟಿಂಗ್. ನಸುನಗೆಯಲ್ಲಿ ಕೆಳಮುಖನಾಗಿ ನೋಡುತ್ತಿರುವ ಈ ಶಾಂತ ಮುಖಮುದ್ರೆ, ಚಿತ್ರದ ಬಂಗಾರವರ್ಣದ ಹೊಳಪು, ಕುಂದಣವಿಟ್ಟಂತೆ ಇತರೇ ವರ್ಣಸಂಯೋಜನೆ ಅತ್ಯದ್ಭುತ. ಇದರೊಂದಿಗೆ 'ವಜ್ರಪಾಣಿ' ವರ್ಣಶಿಲ್ಪವೂ 1ನೇ ಗುಹೆಯಲ್ಲಿ ಕಂಡುಬರುತ್ತವೆ. ಆದರೆ, ದುರದೃಷ್ಟವಶಾತ್ ಈಗ ಇವುಗಳ ವರ್ಣ ಮಾಸಿದೆ. ಕೆಳಭಾಗವಂತೂ ತೀರಾ ಮಂಕಾಗಿದೆ.. 
      ಇಲ್ಲಿಯ ಗೋಡೆ, ಮೇಲ್ಛಾವಣಿ, ಕಂಬಗಳ ಮೇಲೆ ಸೂಕ್ಷ್ಮವಾದ ಕುಸುರಿಕೆತ್ತನೆಯ ವರ್ಣಚಿತ್ರಗಳಿವೆ. ಪರ್ಷಿಯನ್ ರಾಯಭಾರಿಯೊಂದಿಗಿನ ದೃಷ್ಯ, ಅರಮನೆ, ಹೆಂಗಳೆಯರು, ಆಭರಣಗಳ ಚಿತ್ರಗಳಂತೂ ಮನಮೋಹಕ. ಇಲ್ಲೊಂದು ಹರಳಿನ ನೆಕ್ಲೇಸ್ ಚಿತ್ರವಿದೆ. ಇದಕ್ಕೆ ಕೆಳಗಿನಿಂದ ಬೆಳಕು ಬಿಟ್ಟರೆ ಪದಕದ ಹರಳುಗಳು ಫಳಫಳನೆ ಹೊಳೆಯುತ್ತವೆ. ಇಂಥ ಕಲಾವಂತಿಕೆ ಮೆರೆದಿದ್ದಾರೆ ಇದರ ಅದ್ಭುತ ಚಿತ್ರಕಾರರು. ಬಹಳಷ್ಟು ಚಿತ್ರಗಳು ಬೌದ್ಧರ ಜಾತಕಕತೆಗಳ ಕುರಿತಾಗಿಯೇ ಇವೆ. ಈ ಶಿಲ್ಪಗಳು, ಪೈಂಟಿಗ್‍ಗಳು ಆ ಪ್ರಾಚೀನಕಾಲದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಜೀವನಪದ್ಧತಿಗಳಿಗೆ ಹಿಡಿದ ಕನ್ನಡಿಗಳಾಗಿವೆ; ಸಾಮಾಜಿಕ ಚಟುವಟಿಕೆಗಳ ಅಧ್ಯಯನಕ್ಕೆ ಸಹಕಾರಿಯಾಗಿವೆ; ಅಂತರ್ರಾಷ್ಟ್ರೀಯ ವ್ಯಾಪಾರ, ಸ್ನೇಹಸಂಬಂಧ, ಪಾಂಡಿತ್ಯ-ಧರ್ಮವಿನಿಮಯಗಳು ನಡೆದಿರುವ ಕುರಿತ ಸಂಗತಿಗಳಿಗೆ ಬೆಳಕು ಚೆಲ್ಲಿವೆ. ಇವೆಲ್ಲವೂ ಸಾಧ್ಯವಾಗಿರುವುದು ಅಂದಿನ ದೊರೆಗಳ , ಧರ್ಮಾನುಯಾಯಿಗಳ, ಉತ್ತೇಜಕರ ಪ್ರೋತ್ಸಾಹ ಆಸಕ್ತಿಯಿಂದ.. 1, 2 ಗುಹೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಣಚಿತ್ರಗಳಿದ್ದು ಉಳಿದ ಕೆಲವು ಗುಹೆಗಳಲ್ಲಿ ಅಷ್ಟಿಷ್ಟು ಕಂಡು ಬರುತ್ತವೆ. ಎಷ್ಟೋ ಕಾಲ ಎಚ್ಚರಿಕೆ ವಹಿಸದಿದ್ದ ಕಾರಣ ಅನೇಕ ಚಿತ್ರಗಳು ಹಾನಿಯಾಗಿರುವುದರಿಂದ ಈಗ ಪುರಾತತ್ವ ಇಲಾಖೆ ಎಚ್ಚರ ವಹಿಸಿದೆ. ಎಷ್ಟೋ ಅಮೂಲ್ಯಚಿತ್ರಗಳು ತಮ್ಮ ಮೂಲರೂಪವನ್ನು ಕಳೆದುಕೊಂಡಿರುವುದರಿಂದ, ಇವುಗಳ ಸ್ವರೂಪವನ್ನು ಜಗದಾದ್ಯಂತ ಮುಟ್ಟಿಸುವ ಪ್ರಯತ್ನದಲ್ಲಿ ಇವುಗಳ ಯಥಾವತ್ತು ಚಿತ್ರಗಳನ್ನು ನುರಿತ ತಜ್ಞರಿಂದ ಬರೆಸಿ, ಅವುಗಳ ಫೋಟೋ ಮುದ್ರಿಸಿ ಕಲಾಪ್ರೇಮಿಗಳಿಗೆ ದೊರೆವ ನಿಟ್ಟಿನ ಪ್ರಯತ್ನಗಳಾಗಿವೆ. ಇಲ್ಲಿ ಸ್ವಚ್ಛ ಪರಿಸರವಿದೆ, ಸುರಕ್ಷೆಯಿದೆ. 'ಯುನೆಸ್ಕೊ ಹೆರಿಟೇಜ್ ಸೈಟ್' ಮಾನ್ಯತೆ ಕೊಟ್ಟಿದೆ. ಇಷ್ಟೆಲ್ಲ ಇರುವ ನಮ್ಮೀ ಭಾರತದ ಹೆಗ್ಗಳಿಕೆಯ ಗುಹಾಂತರ್ಗತ ದೇಗುಲಗಳನ್ನು ಕಣ್ಣಾರೆ ಒಮ್ಮೆ ನೋಡಲೇಬೇಕು... ಹ್ಞಾಂ, ಇಲ್ಲಿ ವಾಪಸ್ ಬರುವಾಗ ಅಂಗಡಿಸಾಲುಗಳ ಹಾದು ಬರಬೇಕು. ತರಹೇವಾರಿ ವಸ್ತುಗಳು ಹೆಂಗಳೆಯರನ್ನು ಹಿಡಿದು ನಿಲ್ಲಿಸುತ್ತವೆ. ಆದರೆ, ಟೋಪಿ ಬೀಳುವ ಪ್ರಸಂಗಗಳೇ ಹೆಚ್ಚು. ಹೇಳುವ ಬೆಲೆಯ 5ನೇ ಒಂದು ಭಾಗಕ್ಕೆ ಇಳಿಸಿ ಕೊಂಡರೆ ನಷ್ಟವಿಲ್ಲ... 

            ಎಲ್ಲೋರ....  ಅಜಂತದಿಂದ ನೂರುಕಿ.ಮೀ, ಔರಂಗಾಬಾದಿನಿಂದ ಮೂವತ್ತುಕಿ.ಮೀ. ದೂರದ ಎಲ್ಲೋರ ಅಜಂತಾದಿಂದ ಭಿನ್ನ. ಇಲ್ಲಿ ವರ್ಣಚಿತ್ರಗಳಿಲ್ಲ, ಆದರೆ, ಅದ್ಭುತ ಕೆತ್ತನೆಗೆ ಎಲ್ಲೋರ ಇನ್ನೊಂದು ಹೆಸರೆನ್ನಬಹುದು. ಅಜಂತಾದಂತೆ ಇದೂ ಕೂಡ ಬಸಾಲ್ಟ್‍ರಾಕ್ ಪ್ರದೇಶ. ಇಲ್ಲಿಯ ಬೆಟ್ಟ ಅಜಂತಾದಂತೆ ನಿರ್ಮಾಣವಾಗದೆ ವಿಶಾಲವಾಗಿ ಹರಡಿಕೊಂಡಿರುವುದರಿಂದ, ಇಲ್ಲಿಯ ಗುಹೆಗಳ ರಚನೆಯೂ ಗಾತ್ರದಲ್ಲಿ ಹಿರಿದು. ಇಲ್ಲಿಯ ಒಡಲಲ್ಲಿ ಹರಿವ ಎಳಾಗಂಗಾ(ಇಳಾ) ಎನ್ನುವ ತೊರೆಯಿಂದ ಈ ಊರು ಎಳಾಪುರವಾಗಿ ಈಗ ಎಲ್ಲೋರವಾಗಿದೆ. ಈ ತೊರೆ ಗೋದಾವರಿ ನದಿಯನ್ನು ಸೇರುವ ಮುಖ್ಯತೊರೆಗೆ ಪ್ರವಹಿಸಿ ಸೇರುತ್ತದೆ. ಇಲ್ಲಿಯ ಶಿಲಾಬೆಟ್ಟಗಳ ಗಾತ್ರ, ಆಕಾರ, ರಚನೆ ಒಂದರಿನ್ನೊಂದು ಭಿನ್ನವಾಗಿರುವುದರಿಂದ ಪ್ರಾಚೀನ ಕೆತ್ತನೆಗಳಿಗೆ ಬಲು ಪ್ರಶಸ್ತ ತಾಣವಾಗಿತ್ತು. ಜೊತೆಗೆ, ಪ್ರಾಚೀನ ಏಷಿಯಾ ದೇಶಗಳ ವ್ಯಾಪಾರೀಮಾರ್ಗಕ್ಕೆ ಹತ್ತಿರವಾದ ತಾಣವೂ ಆಗಿದ್ದರಿಂದ ಇಲ್ಲಿಯ ಕೆತ್ತನೆಗಳು ಅಗಾಧ ರೀತಿಯಲ್ಲಿ, ವಿಶಿಷ್ಠವಾಗಿ ಅರಳಿರುವ ಸಾಧ್ಯತೆಗಳಿವೆ. ಅಜಂತ ಬಹುಮುಖ್ಯವಾಗಿ ಬೌದ್ಧಗುಹೆಗಳಾದರೆ, ಇಲ್ಲಿ ಜೈನ, ಬೌದ್ಧಗುಹೆಗಳಿದ್ದೂ ಹಿಂದೂಧರ್ಮಾಧಾರಿತ ಗುಹಾಶಿಲ್ಪಗಳೇ ಹೆಚ್ಚು, ಮುಖ್ಯ... ಜಗತ್ತಿನಲ್ಲಿ ಎಲ್ಲೋರ ಹೆಸರು ಮಾಡಿರುವುದೇ ತನ್ನ ಬಂಡೆಬೆಟ್ಟ ಕಡಿದು ಮಾಡಿದ ಶಿಲ್ಪಕಲೆಗೆ. ಅದರಲ್ಲೂ ಇಲ್ಲಿಯ ಮುಖ್ಯದೇಗುಲವಾದ ಕೈಲಾಶನಾಥ ಟೆಂಪಲ್ ಜಗತ್ತಿನಲ್ಲೇ ಅತಿ ವಿಶಿಷ್ಠವಾದ ಏಕಶಿಲಾ ದೇಗುಲ. ಎಲ್ಲೋರಗುಹೆಗಳು ಅಜಂತಾದಷ್ಟು ಪ್ರಾಚೀನವಲ್ಲ. ಕ್ರಿ.ಶ. 6ನೇ ಶತಮಾನದಿಂದ 11-12ನೇ ಶ.ದವರೆಗೂ ನಡೆದ ನಿರ್ಮಾಣಕಾರ್ಯಗಳು. ಇವುಗಳ ನಿರ್ಮಾಣಕ್ಕೆ ಉತ್ತೇಜನ ನೀಡಿದವರು ರಾಷ್ಟ್ರಕೂಟ ದೊರೆಗಳು. ಆದರೆ, ರಾಷ್ಟ್ರಕೂಟರು ಬರುವ ಮುನ್ನವೇ ಇಲ್ಲಿ ಉತ್ಖನನ ನಡೆದು ಕೆಲವು ಗುಹೆಗಳು ಕಂಡುಬಂದಿದ್ದು, ಅವುಗಳ ನಿರ್ಮಾಣಕಾರ್ಯಕ್ಕೆ ಕಾರಣರಾದವರು ಕಲಚೂರಿ ವಂಶಸ್ಥರು ಎನ್ನುವ ದಾಖಲೆಯೂ ಇದೆ. ಏನಿದ್ದರೂ ಹೆಚ್ಚಿನ ಪ್ರಶಂಸಾ ಪಾಲು ರಾಷ್ಟ್ರಕೂಟರಿಗೇ ಸಲ್ಲುತ್ತದೆ. ಹಿಂದೂರಾಜರು ಬೌದ್ಧ, ಜೈನದೇಗುಲಗಳ ನಿರ್ಮಾಣಕ್ಕೂ ಮನಸ್ಸು ಮಾಡಿರುವುದು ಅವರ ಮತಸಹಿಷ್ಣುತೆಗೆ ಸಾಕ್ಷಿಯಾಗಿದೆ. ಈ ಕಾಲ ಮತಧರ್ಮಗಳ ಸಮತೋಲನ ಕಾಪಾಡುವ ಕಾಲವೆಂದು ನಾವು ಪರಿಗಣಿಸಬಹುದು...ಇದು ವ್ಯಾಪಾರೀಮಾರ್ಗಕ್ಕೆ ಸನಿಹವಿರುವುದರಿಂದ ಇಲ್ಲಿಗೆ ಹೆಚ್ಚಿನ ವಿದೇಶೀಪ್ರವಾಸಿಗರು ಆ ಕಾಲದಲ್ಲೇ ಬಂದಿರಬಹುದೆಂದು ಅಂದಾಜಿಸಲಾಗಿದೆ. ಇಂದೋರ್, ಹೈದರಾಬಾದ್ ನಿeóÁಮರ(Nijhamara) ಹಿಡಿತದಲ್ಲೂ ಕೆಲಕಾಲವಿದ್ದ ಈ ಗುಹೆಗಳೀಗ 'ಆರ್ಕೆಲಾಜಿಕಲ್ ಸರ್ವೇ ಆಫ್ ಇಂಡಿಯಾ'ದ ಮೇಲ್ವಿಚಾರಣೆಯಲ್ಲಿದ್ದು, 'ವಲ್ರ್ಡ್ ಹೆರಿಟೇಜ್ ಸೈಟ್' ಮಾನ್ಯತೆಯನ್ನೂ ಪಡೆದಿದೆ. 



            ಗುಹಾಲೋಕದಲ್ಲಿ.... ಇಲ್ಲಿ ಗುಹೆಗಳು ನೂರರ ಸಂಖ್ಯೆಯಲ್ಲಿದ್ದರೂ ಗಣನೆಗೆ ಮುಖ್ಯವಾದದ್ದು ಮೂವತ್ತು. ಆದರೆ, ಎಲ್ಲವನ್ನೂ ನೋಡಲು ಒಂದೆರಡು ದಿನ ತಂಗಬೇಕು. ಆದ್ದರಿಂದ ಸಮಯ ಕಡಿತವಿದ್ದರೆ 16, 21, 10, 32 ಇವಿಷ್ಟರ ರೂಪುರೇಖೆಗಳ ಕಂಡರೂ ಸಾಕು. 1ರಿಂದ 12 ಬೌದ್ಧಗುಹೆಗಳಾಗಿದ್ದು ಅಜಂತಾದಂತೆ ಇಲ್ಲಿಯೂ ವಿಹಾರಗಳು, ಚೈತ್ಯಗೃಹಗಳಿವೆ. ಬುದ್ಧ, ಬೋಧಿಸತ್ವರ ಕೆತ್ತನೆಗಳಿದ್ದು, ಇವುಗಳಲ್ಲಿ ವಿಶ್ವಕರ್ಮಗುಹೆ ಪ್ರಧಾನವಾಗಿದೆ. ಅಪ್ಸರೆಯರ, ಪ್ರಾಕೃತಿಕ ಚಿತ್ರಣಗಳ, ಬುದ್ಧನ ಹಿಂದಿನ ಜನ್ಮಗಳಾದ ಮೈತ್ರೇಯ, ತಾರ, ಅವಲೋಕಿತೇಶ್ವರ, ಮಂಜುಶ್ರೀ ಮೂರ್ತಿಗಳು ಮನಮೋಹಕ ಕೆತ್ತನೆಯಲ್ಲಿ ನಮ್ಮನ್ನು ಸೆರೆ ಹಿಡಿಯುತ್ತವೆ. 30ರಿಂದ 34 ಜೈನಗುಹೆಗಳಾಗಿದ್ದು, 13ರಿಂದ 30 ಹಿಂದೂಗುಹೆಗಳಾಗಿವೆ... ಹಿಂದೂಗುಹಾಲಯಗಳಲ್ಲಿ ರಾಮೇಶ್ವರಗುಹೆ, ಗಂಗಾಗುಹೆಗಳ ಶಿವ-ಪಾರ್ವತಿ ಪ್ರಸಂಗಗಳು, ಸಪ್ತಮಾತೃಕೆಯರು, ಗಂಗಾ-ಯಮುನಾ ಮೂರ್ತಿಗಳನ್ನು ಪ್ರಮುಖವಾಗಿ ಕೆತ್ತಲಾಗಿದ್ದು ಕಣ್ಮನ ಸೆಳೆದರೂ, ಇಲ್ಲಿ ನಮ್ಮನ್ನು ಪೂರ್ತಿ ಸೆರೆ ಹಿಡಿಯುವುದು ಕೈಲಾಶನಾಥ ಟೆಂಪಲ್.. 

   ಕೈಲಾಶನಾಥ ಟೆಂಪಲ್...
                ಒಂದೇ ಒಂದು ಶಿಲಾಬೆಟ್ಟವನ್ನು ಆಯ್ಕೆ ಮಾಡಿಕೊಂಡು, ಮೇಲಿನಿಂದ ಕೆಳಮುಖವಾಗಿ ಕೆತ್ತುತ್ತಾ ದೇಗುಲವಾಗಿಸಿದ ಈ ಕೈಚಳಕಕ್ಕೆ ನಮ್ಮಿಂದ ಮಾತೇ ಹೊರಡುವುದಿಲ್ಲ. ಜಗತ್ತಿನಲ್ಲಿ ಹೀಗೆ ಏಕಶಿಲೆಯಲ್ಲಿ ಕಡೆದ ಇಂಥ ಅದ್ಭುತ ಶಿಲಾದೇಗುಲ ಮತ್ತೊಂದಿಲ್ಲವೆನ್ನುತ್ತಾರೆ ಸಂಶೋಧಕರು. ನಿಗೂಢಮಹಿಮೆಯಂತಿರುವ ಉತ್ತರದ ಕೈಲಾಸಪರ್ವತದಂತೆ ಇದೂ ಕೂಡ ಊಹಿಸಲಾಗದ ನಿಗೂಢರಚನೆ ಎಂದು ಅಚ್ಚರಿಪಡುತ್ತಾನೆ ಓರ್ವ ವಿದೇಶೀ ಸಂಶೋಧಕ. ಮೂರು ಅಂತಸ್ತುಗಳಲ್ಲಿ ರಚನೆಯಾಗಿರುವ ಈ ದೇಗುಲ ರಥದಾಕಾರದಲ್ಲಿದ್ದು, ದೇಗುಲದ ಹಿಂಭಾಗ ಮುಂಭಾಗಗಳನ್ನು ಜೋಡಿಸಲು ಮಧ್ಯೆ ಎರಡು ಸೇತುವೆ, ರಥ ಹೊತ್ತು ನಿಲ್ಲುವ ಆನೆಗಳು, ಚಕ್ರ ಎಲ್ಲವೆಲ್ಲ ಪರಿಪೂರ್ಣವಾಗಿ, ಅದ್ಭುತ ಕುಸುರಿಕಲೆಯಲ್ಲಿ ಕೆತ್ತನೆಯಾಗಿವೆ. ದೊಡ್ಡದಾದ ಪ್ರಾಕಾರ, ಪ್ರಾಂಗಣ, ಅಂತಸ್ತುಗಳ ರಚನೆ, ಎತ್ತರದ ದೀಪಸ್ಥಂಬ, ಪ್ರಾಕಾರದುದ್ದದ ಗುಹೆಗಳಲ್ಲಿ ಕೆತ್ತಿರುವ ಶಿಲ್ಪ-ದೃಷ್ಯಗಳು, ಕೈಲಾಸಪರ್ವತದಾಕಾರದ ಗೋಪುರ, ದಶಾವತಾರ, ಪಂಚಭೂತಗಳು, ಗಂಗಾಯಮುನ ಸರಸ್ವತಿ ಅಬ್ಬಾ, ಹೇಳುತ್ತ ಹೋದರೆ ಇಲ್ಲಿ ಕೆತ್ತನೆಯಾಗಿರುವ ದೇವರು, ದೇವಗಣಗಳು, ಪುರಾಣ ದೃಷ್ಯಗಳು, ಜನಸಾಮಾನ್ಯರ ಸಂಬಂಧಗಳ ಕುರಿತು ಏನುಂಟು-ಏನಿಲ್ಲ ಎನ್ನುವ ಬೆರಗಿಗೆ ಒಳಗಾಗಿ ಬಿಡುತ್ತೇವೆ. ಮೇಲಿನ ಅಂತಸ್ತಿನ ಮಧ್ಯದ ಗರ್ಭಗೃಹ 16ಕಂಬಗಳ ಆಧಾರದಲ್ಲಿ ನಿಂತಿದೆ. ಅಲ್ಲಿ ದೊಡ್ಡದಾದ ಶಿವಲಿಂಗವಿದ್ದು ಎದುರಿನ ಹೊರಾಂಗಣದಲ್ಲಿ ನಂದಿವಿಗ್ರಹವಿದೆ. ಸುತ್ತಲೂ ವಿಶಾಲಜಾಗ ಕೆಳಗೋಡೆಯಲ್ಲಿ ಸುತ್ತಲೂ ಪ್ರಾಣಿಗಳ ಸುಂದರ ಪ್ರತಿಮೆಗಳು, ದೇಗುಲದೆತ್ತರಕೂ ನಿಂತ ದೀಪಸ್ಥಂಬದ ಕುಸುರಿ ವಿನ್ಯಾಸ ನೋಡಿದಷ್ಟೂ ತಣಿಯದ ಶಿಲ್ಪವೈಭವ. ಇಲ್ಲಿಯ ಶೈಲಿ ರಾಷ್ಟ್ರಕೂಟ, ಪಲ್ಲವ ದೊರೆಗಳ ಕಾಲದ ಶೈಲಿಯಾಗಿದೆ.
       ಇಲ್ಲಿ ರಹಸ್ಯ ನೆಲಮಾಳಿಗೆ, ನೀರು ಇಂಗುವ ಗುಂಡಿ, ನೀರು ಹರಿದು ಹೋಗಲು ಉತ್ತಮ ಚರಂಡಿಯಂಥ ಜಾರುಕೋಣೆ ವಿಶಿಷ್ಠವಾಗಿವೆ. ಯಾವುದೇ ಒಂದು ವಿಗ್ರಹ, ಭಾಗ, ಕುಸುರಿಕೆಲಸಗಳನ್ನು ಪ್ರತ್ಯೇಕವಾಗಿ ತಂದು ಜೋಡಿಸಿರುವ ಒಂದು ಉದಾಹರಣೆಯೂ ಇಲ್ಲ. ಕೇವಲ ಉಳಿ, ಕೊಡಲಿ, ಹ್ಯಾಮರ್‍ಗಳ ಸಹಾಯದಿಂದ ಇಂಥದೊಂದು ಭವ್ಯ ಏಕಶಿಲ್ಪ ಕಲಾದೇಗುಲ ನಿರ್ಮಾಣವೆಂದರೆ ಅದು ಪವಾಡಸದೃಶವೇ ಸರಿ. 'ಸಣ್ಣಸಣ್ಣ ವಿವರಗಳನ್ನೂ ಅತ್ಯಂತ ಸಮರ್ಪಕವಾಗಿ, ಕುಂದಿಲ್ಲದಂತೆ ನಿರ್ಮಿಸಿರುವ ಈ ಪ್ರತಿಭೆಗೆ ಇಂದಿನ ತಂತ್ರಜ್ಞಾನ ಏನೇನೂ ಸಾಟಿಯಲ್ಲ, ಅವರ ಗಣಿತಜ್ಞಾನ, ಯೋಜನೆ, ತಜÐತೆಯ ಮಟ್ಟ ಎಷ್ಟು ಉನ್ನತವಿರಬಹುದು, ಬಹುಷಃ ಇದೇ ಇಂದಿನ ಇಂಜಿನಿಯರಿಂಗ್ ಜ್ಞಾನಕ್ಕೆ ಬುನಾದಿಯಾಗಿರಬೇಕೆನ್ನುತ್ತಾರೆ' ವಿದೇಶೀ ತಜ್ಞರು. ಸಾಲಾಗಿ ಮೂವತ್ತು ದೇಗುಲಗಳಿದ್ದರೂ ವಿಮಾನಯಾನದ ವೀಕ್ಷಣೆಯಲ್ಲಿ ಇದೊಂದೇ ದೇಗುಲ ಸ್ಪಷ್ಠವಾಗಿ ಕಾಣಿಸುವುದಂತೆ.... 
       ಇಲ್ಲಿ ಮಳೆಗಾಲದಲ್ಲಿ ಬೆಟ್ಟದೆದೆಯ ಸಣ್ಣಪುಟ್ಟ ಜಲಪಾತಗಳು ಮೈದುಂಬಿ ಇಳಿವುದಂತೆ. ಆ ಕಾಲ ಮನೋಹರ ಎನ್ನುತ್ತಾರೆ ಇಲ್ಲಿನವರು.. ಇಂತಹ, 'ನ ಭೂತೋ ನ ಭವಿಷ್ಯತಿ' ಎನ್ನಬಹುದಾದ ಈ ಕಲಾದೇಗುಲವನ್ನು ಹೇಳಹೆಸರಿಲ್ಲದಂತೆ ನಾಶಮಾಡಲು ಔರಂಗಜೇಬನು ಸಾವಿರ ಸಿಪಾಯಿಗಳನ್ನು ಬಿಟ್ಟನಂತೆ. ಒಂದಿಷ್ಟು ಪ್ರತಿಮೆಗಳ ಮೂಗು, ಮುಖ, ಕೈಕಾಲು, ಆನೆ, ಕುದುರೆಗಳನ್ನು ಅಷ್ಟಿಷ್ಟು ಭಗ್ನಗೊಳಿಸಲಷ್ಟೇ ಸಾಧ್ಯವಾಯಿತಂತೆ ಆ ಕಿರಾತಕರಿಗೆ. ಕೊನೆಗೆ ಪ್ರಯತ್ನ ಕೈ ಬಿಟ್ಟನಂತೆ. 'ಸತ್ಯಕ್ಕೆ ಸಾವಿರುವುದೇ...?' ಕಟ್ಟುವ ಕೆಲಸ ಕೈ ಬೆರಳೆಣಿಕೆಯಷ್ಟು, ಕೆಡಿಸುವ ಮನಸು ಸಾವಿರದಷ್ಟು, ಆದರೆ, ನೋಡಿ ಕೃತಾರ್ಥವಾಗುವ ಕಣ್ಗಳು ಅನಂತದಷ್ಟು. ಒಳಿತನ್ನು ಕಾಪಾಡುವುದು ಅಲ್ಲಿ ನೆಲೆಯಾಗಿರುವ ದೇವನೇ ಎನ್ನುವ ನಂಬಿಕೆ ನಮ್ಮ ನೆಲದ್ದು... ಜೀವಮಾನದಲ್ಲಿ ಒಮ್ಮೆಯಾದರೂ ನೋಡಿ ಸಾರ್ಥಕವಾಗಬೇಕು ಅಜಂತ-ಎಲ್ಲೋರ ಅದ್ಭುತಗಳನ್ನು... 

                                                                         * * * 
                                                                ಎಸ್.ಪಿ.ವಿಜಯಲಕ್ಷ್ಮಿ 
                                                       ಫ್ಲಾಟ್ ನಂ.305, ಚಾರ್ಟರ್ಡಮಡಿ, 17ನೇ ಮುಖ್ಯ ರಸ್ತೆ 
                                                                             2ನೇ ಹಂತ, ಜೆ.ಪಿ.ನಗರ
                                                                                  Bengaluru
                                                                            mo....9980712738

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ